ಜಿಲ್ಲೆ

ಶ್ರೀರಾಮಸೇನೆ ನೇತೃತ್ವದಲ್ಲಿ ಪ್ರತಿಭಟನೆ

ಧಾರವಾಡ: ಕರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಗರದ ಶ್ಯಾಮಿಯಾನ, ಲೈಟಿಂಗ್ ಹಾಗೂ ಸೌಂಡ್ ಸಿಸ್ಟಮ್ ಉದ್ಯೋಗ ಮಾಡುವವರ ಪರಿಸ್ಥಿತಿ ಗಂಭೀರವಾಗಿದೆ. ಅವರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಶ್ಯಾಮಿಯಾನ, ಲೈಟಿಂಗ್ ಹಾಗೂ ಸೌಂಡ್ ಸಿಸ್ಟಮ್ ಉದ್ಯೋಗಿಗಳಿಗೆ ತಮ್ಮ ಉದ್ಯೋಗ ಆರಂಭಿಸಲು ಅನುಮತಿ ನೀಡಬೇಕು. ಸದ್ಯ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಅವರ ಜೀವನ ನಿರ್ವಹಣೆಗೆ ಅವಕಾಶ ಕಲ್ಪಿಸಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.

ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು, ಶ್ಯಾಮಿಯಾನ ಅಂಗಡಿಗಳ ಮಾಲೀಕರು, ಕೆಲಸಗಾರರು ಭಾಗವಹಿಸಿದ್ದರು.