ಜಿಲ್ಲೆ

ಶ್ರೀಗಳ ಬದುಕು ಸಮಾಜಕ್ಕೆ ಮೀಸಲು

ಮುಂಡರಗಿ: ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರು ಬದುಕನ್ನು ಸೇವೆಯನ್ನಾಗಿಸಿಕೊಂಡು ಬಾಳುವುದರ ಮೂಲಕ ಸಾರ್ವಜನಿಕವಾಗಿ, ಭಗವಂತನಿಗೆ ಸಮರ್ಪಣೆಯಾಗುವ ಕಾರ್ಯಗಳನ್ನು ಮಾಡಿದ್ದಾರೆ ಎಂದು ಕನಕಗಿರಿ ಸುವರ್ಣಗಿರಿ ವಿರಕ್ತಮಠದ ಡಾ.ಚನ್ನಮಲ್ಲ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರ 80ನೇ ಜನ್ಮ ದಿನೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ನೂರಾರು ಕೃತಿಗಳನ್ನು ರಚಿಸಿ ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇತಿಹಾಸ ರಚಿಸಲು ಸಹಕಾರಿಯಾಗುವಂತಹ ಸಾಧನೆ ಶ್ರೀಗಳು ಮಾಡಿದ್ದಾರೆ. ಪ್ರತಿಯೊಂದು ಕೆಲಸದಲ್ಲಿ ಶ್ರೀಗಳು ಕಳಕಳಿ ಭಾವವನ್ನು ಹೊಂದಿದ್ದಾರೆ. ಬದುಕನ್ನು ಸಮಾಜಕ್ಕೆ ಮೀಸಲಿಟ್ಟಿದ್ದಾರೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀಮಠದ ಹಿಂದಿನ ಪೂಜ್ಯರ ಕೃಪಾ ಆಶೀರ್ವಾದದಿಂದ ಶ್ರೀಮಠದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮಠದಿಂದ ನಿರಂತರವಾಗಿ ಸಾಹಿತ್ಯಿಕ, ಶೈಕ್ಷಣಿಕ, ಧಾರ್ವಿುಕ, ಸಾಮಾಜಿಕ ಕೆಲಸಗಳು ನಡೆಯುತ್ತಿವೆ’ ಎಂದರು.

ಲಿಂಗನಾಯಕನಹಳ್ಳಿ ಶ್ರೀ ಚನ್ನವೀರ ಸ್ವಾಮೀಜಿ ಮತ್ತಿತರರು ಮಾತನಾಡಿದರು. ಘೊಡಗೇರಿ ವಿರಕ್ತಮಠದ ಶ್ರೀ ಕಾಶೀನಾಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಮಠಾಧೀಶಕರು ಹಾಗೂ ಭಕ್ತರು ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಿದರು. ಈವೇಳೆ ಶರಣೆ ವಿಜಯಾ ಪರಂಜ್ಯೋತಿ ಅವರು ರಚಿಸಿದ ಅಮೃತ ಕಲಶ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ, ರಾಮಕೃಷ್ಣ ದೊಡ್ಡಮನಿ, ಕರಬಸಪ್ಪ ಹಂಚಿನಾಳ, ಡಾ.ಬಿ.ಜಿ. ಜವಳಿ, ಅಂದಪ್ಪ ಬೆಲ್ಲದ, ಡಾ. ಬಿ.ಎಸ್. ಮೇಟಿ, ಎಸ್​ಬಿಕೆ ಗೌಡರ, ಡಾ. ಡಿ.ಸಿ. ಮಠ, ಕಾಂತರಾಜ ಹಿರೇಮಠ, ಯು.ಸಿ. ಹಂಪಿಮಠ, ರಾಜೇಸಾಬ್ ಬೆಟಗೇರಿ, ವೀರೇಶ ಸಜ್ಜನರ, ಕುಮಾರ ಬನ್ನಿಕೊಪ್ಪ, ನಾಗಭೂಷಣ ಹಿರೇಮಠ, ಪಾಲಾಕ್ಷಿ ಗಣದಿನ್ನಿ, ದೇವಪ್ಪ ರಾಮೇನಹಳ್ಳಿ, ಶಿಕ್ಷಕ ಎಸ್.ಎಸ್. ಇನಾಮತಿ ಇತರರಿದ್ದರು.