ಜಿಲ್ಲೆ

ಶ್ರೀ ಮೈಲಾರಲಿಂಗೇಶ್ವರ ಅದ್ದೂರಿ ಉತ್ಸವ

ಬೀರೂರು: ಪಟ್ಟಣದ ಸರಸ್ವತಿಪುರಂ ಬಡಾವಣೆ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ದಸರಾ ಮಹೋತ್ಸವ ಅಂಗವಾಗಿ ಶುಕ್ರವಾರ ದೇವರನ್ನು ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಮುಗಿದ ಬಳಿಕ ಉತ್ಸವ ಮೂರ್ತಿಯನ್ನು ಸಾರೋಟಿನಲ್ಲಿ ಪ್ರತಿಷ್ಠಾಪಿಸಿ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಯಿತು. ವಾದ್ಯಗೋಷ್ಠಿಗಳೊಂದಿಗೆ ಅಜ್ಜಂಪುರ ರಸ್ತೆ ಮಾರ್ಗವಾಗಿ ಉತ್ಸವ ಸಾಗಿ ಮಹಾತ್ಮ ಗಾಂಧಿ ವೃತ್ತಕ್ಕೆ ಬಂದ ಕೂಡಲೇ ಮದ್ದುಗುಂಡುಗಳನ್ನು ಸಿಡಿಸಿದರು. ಏಳುಕೋಟಿ ಚಾಂಗಮಲೋ ಎಂಬ ಜಯಘೊಷ ಹಾಕಿದರು.

ದೇವರಿಗೆ ಹಮಾಲಿಗಳ ಸಂಘದಿಂದ ಬೃಹದಾಕಾರದ ಹೂವಿನ ಹಾರ, ಗೊರವರ ಗಂಟೆ ಮತ್ತು ಢಮರುಗದ ಸದ್ದು ಮೊಳಗಿತು. ಉತ್ಸವದಲ್ಲಿ ಹೆಜ್ಜೆ ಹಾಕಿದ ಬಸವನೊಂದಿಗೆ ಭಕ್ತರು ಸೆಲ್ಪಿ ತೆಗೆದುಕೊಂಡರು. ಬಿ.ಎಚ್.ರಸ್ತೆಯಿಂದ ಸಾಗಿದ ಉತ್ಸವ ಹಳೇಪೇಟೆ ಶ್ರೀ ವೀರಭದ್ರಸ್ವಾಮಿಯ ದರ್ಶನ ಪಡೆದು ಪುನಃ ಅಜ್ಜಂಪುರ ರಸ್ತೆ ಮೂಲಕ ಹಾದು ಮೂಲಸ್ಥಾನ ತಲುಪಿತು. ಉತ್ಸವದಲ್ಲಿ ಭಕ್ತರು ಕುಣಿದು ಸಂಭ್ರಮಿಸಿದರು.