ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನ ಶ್ರಾವಣ ಮಾಸದ ಪ್ರಯುಕ್ತ ಸಿಂಗಾರಗೊಂಡಿದ್ದು, ಆ. 5ರಿಂದ ಒಂದು ತಿಂಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ.
ಶ್ರಾವಣ ಮಾಸದಲ್ಲಿ ಸವದತ್ತಿ, ಉಗರಗೋಳ, ಚಿಕ್ಕುಂಬಿ, ಚುಳಕಿ, ಹಿರೇಕುಂಬಿ, ಹರ್ಲಾಪುರ, ಯಡ್ರಾಂವಿ, ಬೆಟಸೂರ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಕಾಲ್ನಡಿಗೆ ಮೂಲಕವೇ ಯಲ್ಲಮ್ಮ ದೇವಿ ಸನ್ನಿಧಿಗೆ ಬರುತ್ತಾರೆ. ಮಧ್ಯರಾತ್ರಿ 3ರಿಂದಲೇ ಮನೆಯಿಂದ ಹೊರಡುತ್ತಾರೆ.
ಶ್ರಾವಣದಲ್ಲಿ ನಿತ್ಯ ಎರಡು ಬಾರಿ ಯಲ್ಲಮ್ಮನಿಗೆ ವಿಶೇಷ ಪೂಜೆ, ಅಲಂಕಾರ ಮತ್ತು ನೈವೇದ್ಯ ಅರ್ಪಿಸಲಾಗುತ್ತದೆ. ಪ್ರತಿದಿನ ಪಲ್ಲಕ್ಕಿ ಉತ್ಸವ ಇರುತ್ತದೆ. ಬೆಳಗಿನಜಾವ 4.30ರಿಂದಲೇ ದೇವಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಯಲ್ಲಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ.ಮಹೇಶ ತಿಳಿಸಿದ್ದಾರೆ.
ಗುಡ್ಡದಲ್ಲಿ ತೆಂಗಿನಕಾಯಿ, ಕುಂಕುಮ&ಭಂಡಾರ, ಕರ್ಪೂರ ಇತರ ಪೂಜಾ ಸಾಮಗ್ರಿಗಳನ್ನು ಮಾರುವವರು ತಮ್ಮ ಅಂಗಡಿಗಳನ್ನು ಸಿಂಗರಿಸಿದ್ದಾರೆ. ಮಧ್ಯರಾತ್ರಿಯಿಂದಲೇ ಭಕ್ತರು ಕಾಲ್ನಡಿಗೆ ಮೂಲಕ ಬರುವ ಕಾರಣ, ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.
ಭಕ್ತರು ಕಾಲ್ನಡಿಗೆ ಮೂಲಕ ಗುಡ್ಡಕ್ಕೆ ಬರುವ ಮಾರ್ಗದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಅವರಿಗೆ ಶುದ್ಧ ಕುಡಿಯುವ ನೀರು ಸೇರಿ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ಬಿಗಿ ಭದ್ರತೆಗೆ ಕ್ರಮ ವಹಿಸಲಾಗುವುದು