ಕಾಗವಾಡ: ಜೈನ ಧರ್ಮದ ತೀರ್ಥಕ್ಷೇತ್ರ ಹಾಸನದ ಶ್ರವಣಬೆಳಗೊಳ ಹಾಗೂ ಇತರ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಬೆಂಗಳೂರಿನ ವಿಕಾಸ ಸೌಧದಲ್ಲಿ ಗುರುವಾರ ಜೈನ ಸಮಾಜ ಮುಖಂಡರು ಹಾಗೂ ಐಎಎಸ್ ಅಧಿಕಾರಿಗಳ ಜತೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ದೇಶದ ಮೂಲೆ ಮೂಲೆಗಳಿಂದ ಭಕ್ತರು ಪುಣ್ಯ ಕ್ಷೇತ್ರಗಳಿಗೆ ಬರುವುದರಿಂದ ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ. ಪಾದಯಾತ್ರಿಗಳಿಗೆ ವಸತಿ ಗೃಹ ಹಾಗೂ ಮುನಿ ನಿವಾಸ ನಿರ್ಮಿಸಲು 50 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ ಎಲ್ಲ ಕ್ರಮ ಕೈಗೊಳ್ಳಲಾಗುವುದು. ದೇಶಕ್ಕೆ ಜೈನ ಸಮುದಾಯದ ಕೊಡುಗೆ ಹೆಚ್ಚಿದೆ. ಶ್ರವಣಬೆಳಗೊಳದ ಭಗವಾನ್ ಬಾಹುಬಲಿಯ ದರ್ಶನಕ್ಕಾಗಿ ವರ್ಷದ 12 ತಿಂಗಳು ಸಾರ್ವಜನಿಕರು ಬರುತ್ತಾರೆ. ಕಾಲ್ನಡಿಗೆ ಮೂಲಕವೂ ಬರುವವರ ಸಂಖ್ಯೆ ಹೆಚ್ಚಿದೆ. ಅಂಥವರಿಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ಸಮಾಜ ಮುಖಂಡರು ಸೂಚಿಸುವ ಸ್ಥಳಗಳಲ್ಲಿ ವಸತಿ ಗೃಹ ನಿರ್ಮಿಸಲಾಗುವುದು ಎಂದರು. ಹಾಸನದ ಜೈನ ಸಮಾಜ ಮುಖಂಡರಾದ ಅನಿಲ ಶೆಟ್ಟಿ, ರಾಜಶೇಖರ ಖನ್ನಾ, ಸಾಂಗ್ಲಿ ಮಾಜಿ ಮಹಾಪೌರ ಸುರೇಶ ಪಾಟೀಲ, ಮೈಸೂರಿನ ವಿನೋದ ಬಕ್ಲಿವಾಡ, ಬೆಳಗಾವಿಯ ವಿನೋದ ದೊಡ್ಡಣ್ಣವರ, ಕಾಗವಾಡ ತಾಲೂಕಿನ ಪದ್ಮಾವತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶೀತಲಗೌಡ ಪಾಟೀಲ, ಶಿರಗುಪ್ಪಿ ಪಿಕೆಪಿಎಸ್ ಅಧ್ಯಕ್ಷ ಅಭಯ ಕುಮಾರ ಅಕಿವಾಟೆ, ಕೆಆರ್‌ಇ ಸಂಸ್ಥೆ ಅಧ್ಯಕ್ಷ ದಾದಾ ಪಾಟೀಲ ಹಾಗೂ ಇತರರು ಇದ್ದರು. ಇದೆ ವೇಳೆ ಸಚಿವರನ್ನು ಸನ್ಮಾನಿಸಲಾಯಿತು.