ಚನ್ನರಾಯಪಟ್ಟಣ: ಮನುಷ್ಯನಲ್ಲಿ ಯಾವುದಾದರೂ ಅಂಗಾಂಗಗಳು ನ್ಯೂನತೆ ಇದ್ದಾಗ ಮಾನಸಿಕವಾಗಿ ಕುಗ್ಗಿರುತ್ತಾರೆ. ನೂನ್ಯತೆ ಸರಿಯಾದ ನಂತರ ಸಾಮಾನ್ಯರಂತೆ ಸಂತೋಷದಿಂದ ಜೀವನ ಸಾಗಿಸುತ್ತಾರೆ. ವೈಯಕ್ತಿಕವಾಗಿ ಇದು ನನಗೆ ಹೆಚ್ಚು ತೃಪ್ತಿ ನೀಡಿದ ಕಾರ್ಯಕ್ರಮ ಎಂದು ಶಾಸಕ ಸಿ. ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಶ್ರವಣ ದೋಷವುಳ್ಳ ಫಲಾನುಭವಿಗಳಿಗೆ ಶ್ರವಣ ಸಾಧನವನ್ನು ವಿತರಿಸಿ, ಮಾತನಾಡಿದ ಅವರು, ಮುಂಬೈನ ಗೌಡರ ಉನ್ನತೀಕರಣ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಹಾಗೂ ಮುಂಬೈನ ಆಲಿ ಯವರ್ ಜಂಗ್ ಸಂಸ್ಥೆ, ಭಾರತ ಸರ್ಕಾರದ ಯೋಜನೆಯಡಿ ಬೋಜರಾಜಗೌಡರು ಹಾಗೂ ಅವರ ತಂಡ ಒಟ್ಟು 1.12 ಕೋಟಿ ಮೌಲ್ಯದ ಶ್ರವಣ ಸಾಧನೆಗಳನ್ನು ನೀಡಿದೆ. ಈ ಮಹತ್ಕಾರ್ಯಕ್ಕೆ ಸಹಕರಿಸಿದ ಅವರಿಗೂ ಮತ್ತು ಅವರ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಶ್ಲಾಘಿಸಿದರು. ಈ ಕಾರ್ಯಕ್ರಮವು ಇಲ್ಲಿಗೆ ಅಂತ್ಯವಾಗದೆ ಎರಡನೇ ಹಂತದಲ್ಲಿ ಶ್ರವಣದೋಷ ಸಮಸ್ಯೆ ಇರುವ 100 ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಶ್ರವಣ ಸಾಧವನ್ನು ನೀಡಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರವಣ ಸಾಧನ ಅಳವಡಿಸಿಕೊಂಡು ಶ್ರವಣ ದೋಷದಿಂದ ಮುಕ್ತಿ ಹೊಂದಿದ ಫಲಾನುಭವಿಗಳು ಶಾಸಕರಿಗೆ ಅಭಿನಂದಿಸಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ವಿ.ಮಹೇಶ್ ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಪುರಸಭಾ ಅಧ್ಯಕ್ಷೆ ರೇಖಾ ಅನಿಲ್, ಉಪಾಧ್ಯಕ್ಷೆ ಲಕ್ಷ್ಮೀ ವೆಂಕಟೇಶ್, ಸದಸ್ಯೆ ಕವಿತಾ ರಾಜು, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೆಂಕಟೇಶ್, ವಿಕಲಚೇತನರ ಸಂಯೋಜಕ ಸುಬ್ರಮಣ್ಯ, ನೀಲಮ್ಮ, ಶೋಭಾ, ಗುರುಮೂರ್ತಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.