ಬೇಲೂರು: ಸುಕ್ಷೇತ್ರ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನ ಬಿಕ್ಕೋಡು ಶಾಖಾ ಮಠದಲ್ಲಿ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ನೇತೃತ್ವದಲ್ಲಿ ಧನುರ್ಮಾಸ ಪೂಜಾ ಮುಕ್ತಾಯ ಹಾಗೂ ಶುಭ ಸಂಕ್ರಾಂತಿ ಆಚರಣಾ ಧಾರ್ಮಿಕ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಹಾಗೂ ಗಣ್ಯರು ಮಂಗಳವಾರ ಚಾಲನೆ ನೀಡಿದರು.
ಕೊಳಗುಂದ ಕೇದಿಗೆ ಮಠದ ಶ್ರೀ ಜಯ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಜನ್ಮ ತಾಳಿದ ಬಸವಾದಿ ಶರಣರು ನೀಡಿದ ಕಾಯಕ ಸಂಸ್ಕೃತಿ ಮತ್ತು ದಾಸೋಹ ನಿಜಕ್ಕೂ ಅಗಮ್ಯವಾಗಿದೆ. ದೇಶವನ್ನು ಪ್ರಗತಿಯತ್ತ ಸಾಗಿಸಲು ಶರಣರು ನೀಡಿದ ಕಾಯಕ ಸಂಸ್ಕೃತಿ ದುಡಿಯುವ ಶ್ರಮಿಕರಿಗೆ ನಾವು ಬೆಂಬಲ ನೀಡುವ ಅಗತ್ಯವಿದೆ. ಅಲ್ಲದೆ, ಕೋಡಿಮಠ ಹಾಗೂ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೆ ಸರ್ವರನ್ನು ಅಭಿಮಾನಿಸುವ ಗುಣ ಬೆಳೆಸಿದ್ದರಿಂದ ಇಂದು ಕೋಡಿಮಠ ದೇಶದ ಇತಿಹಾಸದ ಪುಟದಲ್ಲಿ ತನ್ನದೇ ಆದ ಖ್ಯಾತಿ ಪಡೆದಿದೆ. ದಿನದಿಂದ ದಿನಕ್ಕೆ ಭಕ್ತರು ಮಠದತ್ತ ಬರುವುದು ಹೆಚ್ಚಾಗುವುದನ್ನು ನೋಡಿದರೆ ಸ್ವಾಮೀಜಿಯವರ ಸರ್ವಧರ್ಮ ಪ್ರೀತಿ ಎದ್ದು ಕಾಣುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ನಮ್ಮಲ್ಲಿ ತಂತ್ರಜ್ಞಾನ ಬೆಳೆದಂತೆ ಗಟ್ಟಿತನ ಕುಗ್ಗುತ್ತಿದೆ. ಪೂರ್ವಿಕರಲ್ಲಿನ ಸಂತೋಷ ಇಂದಿನ ಸಮಾಜದಲ್ಲಿ ಕಾಣುತ್ತಿಲ್ಲ, ಕಾಯಕದಿಂದ ವಿಮುಕ್ತಿ ಪಡೆದು ಸುಖದತ್ತ ಸಾಗುತ್ತಿರುವ ದಿನ ಮಾನದಲ್ಲಿ ಬಹುತೇಕರಲ್ಲಿ ಅನಾಥಪ್ರಜ್ಞೆ ಕಾಡುತ್ತಿದೆ ಎಂದು ಬೇಸರಿಸಿದರು.
ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿ, ಅರಸೀಕೆರೆ ಯಳನಾಡು ಮಹಾಸಂಸ್ಥಾನ ಮಠದದ ಶ್ರೀ ಜ್ಞಾನಪ್ರಭು ಸಿದ್ದರಾಮೇಶ್ವರ ದೇಶಿಕೇಂದ್ರ ಮಹಾಸ್ವಾಮೀಜಿ, ಸಂಕಲಾಪುರ ಸ್ವಾಮೀಜಿ, ಹಾಸನ ಡಯಟ್ ಹಿರಿಯ ಉಪನ್ಯಾಸಕ ರವಿಕುಮಾರ್, ಬಿಕ್ಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಕಾಂತರಾಜು, ಉಪಾಧ್ಯಕ್ಷೆ ಶೋಭಾ, ಮಾಜಿ ಅಧ್ಯಕ್ಷ ಶಿವಶಂಕರ್, ಮುಖಂಡರಾದ ಬಸವರಾಜ್, ಶಾಂತಪ್ಪ, ವನಿತಾ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ವಿಜಯ ಕೇಶವ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಇತರರಿದ್ದರು.