ವಿರಾಜಪೇಟೆ: ತಮ್ಮ ಶೈಕ್ಷಣಿಕ ಪ್ರಗತಿಗಾಗಿ ವಿದ್ಯಾರ್ಥಿಗಳು ಹಾಕುವ ಶ್ರಮವು ಕೇವಲ ಅವರ ಭವಿಷ್ಯವನ್ನು ಮಾತ್ರವಲ್ಲ, ಒಂದು ಸಂಪೂರ್ಣ ಕುಟುಂಬದ ಭವಿಷ್ಯವನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದೆ ಎಂದು ಮಂಗಳೂರಿನ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಸಿ.ಇ.ಟಿ. ತರಬೇತುದಾರ ಡಾ.ಪ್ರಶಾಂತ್‌ರಾವ್ ಅಭಿಪ್ರಾಯಪಟ್ಟರು.
ಪಟ್ಟಣದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಚಾಣಕ್ಯ ಕೋಚಿಂಗ್ ಕೇಂದ್ರದ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಇತ್ತೀಚೆಗೆ ನಡೆದ ಸಿ.ಇ.ಟಿ, ಜೆ.ಇ.ಇ ಹಾಗೂ ನೀಟ್ ಪರೀಕ್ಷೆಯ ಮಹತ್ವ ಹಾಗೂ ಸಿದ್ಧತೆಯ ಕುರಿತ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ, ನಗರ ಪ್ರದೇಶಗಳಿಗೆ ಹೋಲಿಸಿದಾಗ ಪುಟ್ಟ ಊರುಗಳಲ್ಲಿ ಕೆಲ ಕೊರತೆಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆಗೆ ಅಡ್ಡಿಯಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೂಡ ಬುದ್ಧಿವಂತರಾಗಿದ್ದು, ವಾರ್ಷಿಕ ಪರೀಕ್ಷೆಯಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಷ್ಟೇ ಉತ್ತಮ ಅಂಕ ಗಳಿಸುತ್ತಾರೆ. ಆದರೆ ಅಗತ್ಯ ಸಿದ್ಧತೆಯಿಲ್ಲವಾದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಲ್ಲಿ ವಿಫಲವಾಗುತ್ತಾರೆ. ಇದರಿಂದ ರಾಜ್ಯ ಹಾಗೂ ದೇಶದ ಅತ್ಯುತ್ತಮ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವುದರಿಂದ ವಂಚಿತರಾಗುತ್ತಾರೆ ಎಂದರು.
ಶ್ರಮಕ್ಕೆ ಪರ್ಯಾಯವಾದ ಮತ್ತೊಂದು ಮಾರ್ಗವಿಲ್ಲ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಂದರ್ಭದಲ್ಲಿ ತೊಡಗಿಸಿದ ಶ್ರಮಕ್ಕೆ ಖಂಡಿತವಾಗಿ ಪ್ರತಿಫಲವಿದ್ದೆ ಇರುತ್ತದೆ. ವಿಶೇಷವಾಗಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣದ ಎರಡು ವರ್ಷಗಳನ್ನು ತಪಸ್ಸಿನಂತೆ ಪೂರ್ಣಗೊಳಿಸಬೇಕು. ಹಾಗಿದ್ದರೆ ಮಾತ್ರ ಸಾಧನೆ ಸಾಧ್ಯ. ಈ ಸಂದರ್ಭ ಮೊಬೈಲ್, ಟಿ.ವಿ. ಸೇರಿದಂತೆ ಕೆಲ ತ್ಯಾಗಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಬೇಕು. ಹೆಚ್ಚಿನ ಸಮಯವನ್ನು ಓದಿಗೆ ಮೀಸಲಿಡಬೇಕು. ಪಾಲಕರು ಈ ಕುರಿತು ಗಮನಹರಿಸಬೇಕು. ವಿದ್ಯಾರ್ಥಿಯೊಬ್ಬ ಗುರಿ ಸಾಧಿಸುವಲ್ಲಿ ಶಿಕ್ಷಕ ಹಾಗೂ ಪಾಲಕರ ಪಾತ್ರ ಸಮಾನವಾಗಿದೆ ಎಂದರು.
ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೈ ಮುತ್ತು, ಉಪನ್ಯಾಸಕ ಡಾ.ಹೇಮಂತ್, ಉಪನ್ಯಾಸಕಿಯರಾದ ಬಿ.ಎಂ.ರಶ್ಮಿ ಹಾಗೂ ಅಶ್ವಿನಿ ಮಾತನಾಡಿದರು. ಕಾಲೇಜಿನ ಉಪನ್ಯಾಸಕರಾದ ಜೋಮೋನ್ ಥೋಮಸ್, ನೋಹ ವಿವೇಕ್, ಜಯಿದ್ ಹಾಗೂ ಮೋಹನಾಕ್ಷಿ ಇದ್ದರು.
ಕಾರ್ಯಾಗಾರದಲ್ಲಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.