ಬಾಳೆಹೊನ್ನೂರು: ಹುಟ್ಟು ಸಾವು ಮನುಷ್ಯನ ಕೈಯಲ್ಲಿ ಇಲ್ಲ. ಆದರೆ ಬದುಕು ಕಟ್ಟಿಕೊಳ್ಳುವ ಶಕ್ತಿಯಿದೆ. ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.
ಗುರುವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿದೇವ ಜಗದ್ಗುರುಗಳವರ ಲಿಂಗಾಂಗ ಸಾಮರಸ್ಯದ 31ನೇ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತಿಳಿದು ಬರುವುದು ಜನನ. ತಿಳಿಯದೇ ಬರುವುದು ಮರಣ. ಆದರೆ ಎಲ್ಲವನ್ನೂ ತಿಳಿದು ಬದುಕುವುದೇ ಜೀವನ. ಒಳ್ಳೆಯ ಯೋಚನೆಗಳು ಯಾವಾಗಲೂ ಉತ್ತಮ ಲಿತಾಂಶ ಕೊಡುತ್ತವೆ. ದುಡಿಮೆಯಲ್ಲಿ ಕ್ರಮ, ನಿಯಮ, ಗುರಿ, ಸದ್ಭಾವನೆ, ವಿವೇಚನೆ ಇರಬೇಕಾಗುತ್ತದೆ ಎಂದರು.
ಹಡಗು ಎಷ್ಟೇ ಭಾರವಿದ್ದರೂ ಕಡಲ ಮೇಲೆ ತೇಲುವಂತೆ ಮನಸ್ಸು ಎಷ್ಟೇ ಭಾರವಾದರೂ ಬದುಕಿನ ಜತೆ ಸಾಗಲೇಬೇಕು. ಕಲಿತ ಅಕ್ಷರ, ದುಡಿದು ತಿನ್ನುವ ಅನ್ನ, ಕಷ್ಟಪಟ್ಟು ಗಳಿಸಿದ ಸಂಪತ್ತು, ಇಷ್ಟಪಟ್ಟು ಮಾಡುವ ದೈವಭಕ್ತಿ ಯಾರನ್ನು ಯಾವತ್ತೂ ಕೈ ಬಿಡುವುದಿಲ್ಲವೆಂಬ ಆತ್ಮವಿಶ್ವಾಸವನ್ನು ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳು ಹೊಂದಿ ಬದುಕಿನುದ್ದಕ್ಕೂ ಸತ್ಕಾರ್ಯಗಳನ್ನು ಮಾಡಿದ್ದನ್ನು ಮರೆಯಲಾಗದು. ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ ಜೀವನ ಮೌಲ್ಯಗಳನ್ನು ಪರಿಪಾಲಿಸಿ ಭಕ್ತ ಸಂಕುಲದ ಬಾಳಿಗೆ ಸಂಜೀವಿನಿಯಾಗಿದ್ದರು. ಅವರ ಆದರ್ಶಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.
ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮೀಜಿ, ಕಲಾದಗಿ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ನುಡಿ ನಮನ ಸಲ್ಲಿಸಿದರು. ಸಮಾರಂಭದಲ್ಲಿ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಆಲ್ದೂರು ಹೋಬಳಿ ವೀರಶೈವ ಲಿಂಗಾಯತ ಸಮಾಜದ ಗೌರವ ಅಧ್ಯಕ್ಷ ಇ.ಸಿ.ಉಮೇಶ, ಅಧ್ಯಕ್ಷ ಕೆ.ಎಸ್.ಮಹೇಶ, ಉಪಾಧ್ಯಕ್ಷ ಇ.ಸಿ.ಕುಮಾರ, ಕಾರ್ಯದರ್ಶಿ ವೈ.ಸಿ.ಹರೀಶ, ಯು.ಜಿ.ರಾಜೇಶ, ಬಿ.ಎಸ್.ರಾಜೀವ, ಬಿ.ಎಸ್.ಮಂಜುನಾಥ, ಎ.ಎಸ್.ಪ್ರಶಾಂತ, ಬಸವರಾಜ, ನಂದೀಶ, ಉಮೇಶ, ವಸಂತೇಗೌಡ, ಶಂಕರೇಗೌಡ ಅವರು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಆಲ್ದೂರು ಹೋಬಳಿ ವೀರಶೈವ ಸಮಾಜ ಬಾಂಧವರಿಂದ ಅನ್ನ ದಾಸೋಹ ಜರುಗಿತು.
ಪ್ರಾತಃಕಾಲ ಶ್ರೀ ಪೀಠದ ಎಲ್ಲ ದೈವಗಳಿಗೆ ಮತ್ತು ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರ ಗದ್ದುಗೆಗೆ ರುದ್ರಾಭಿಷೇಕ ಅಷ್ಟೋತ್ತರ ಮಹಾಮಂಗಲ ಜರುಗಿತು. ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಯಿಂದ ಲಿಂಗೈಕ್ಯ ಶ್ರೀ ರುದ್ರಮುನಿ ಜಗದ್ಗುರುಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.