ನಂಜನಗೂಡು: ನಿರ್ದಿಷ್ಟ ಗುರಿಯಿಟ್ಟುಕೊಂಡು ಶ್ರದ್ಧೆ, ನಿಷ್ಠೆಯಿಂದ ವ್ಯಾಸಂಗ ಮಾಡಿದರೆ ಮಾತ್ರ ಜೀವನದಲ್ಲಿ ವಿಜಯ ಸಾಧಿಸಲು ಸಾಧ್ಯ ಎಂದು ಕೆಎಎಸ್ ಅಧಿಕಾರಿ ಜೆ.ಮಂಜುನಾಥ್ ಹೇಳಿದರು.
ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಕನಕ ಜಯಂತಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪ್ರೌಢ ವಯಸ್ಸಿನಲ್ಲಿ ಶಿಸ್ತು, ಸಂಸ್ಕಾರ, ವಿನಯವಂತಿಕೆ ರೂಢಿಸಿಕೊಂಡಾಗ ಮಾತ್ರ ವ್ಯಾಸಂಗದಲ್ಲಿ ಉನ್ನತಿ ಕಾಣಲು ಸಾಧ್ಯ. ಆ ಮೂಲಕ ನಿರ್ದಿಷ್ಟ ಗುರಿ ಮುಟ್ಟಿ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಬಹುದು ಎಂದರು.
ಮೂಳೆ ತಜ್ಞ ಡಾ.ಮಾಲೇಗೌಡ ಮಾತನಾಡಿ, ಮಹನೀಯರ ಅಭಿಮಾನಿಗಳಾಗುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರ ಆದರ್ಶಗಳನ್ನು ರೂಢಿಸಿಕೊಂಡು ಸಂಸ್ಕಾರವಂತ ಸಮಾಜ ಕಟ್ಟುವ ಕಾಯಕದಲ್ಲಿ ನಾವೆಲ್ಲರೂ ತೊಡಗಬೇಕು ಎಂದು ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಬಿ.ಬಸಪ್ಪ, ಉದ್ಯಮಿ ಮೂರ್ತಿ, ಸಮಾಜ ಸೇವಕ ಜೆ.ಜೆ.ಆನಂದ, ಮಧುಸೂದನ್, ನಗರಸಭಾ ಸದಸ್ಯ ಯೋಗೀಶ್, ಕೆಂಪಿಸಿದ್ದನಹುಂಡಿ ಮಹದೇವು ಇತರರು ಹಾಜರಿದ್ದರು.