ಬೀದರ್: ಲಿಂಗಾಯತ ಸೇವಾ ದಳದ ವತಿಯಿಂದ ಇಲ್ಲಿಯ ಪಾಪನಾಶ ಗೇಟ್ ಒಳಗಡೆ ಇರುವ ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಇಷ್ಟಲಿಂಗ ಪೂಜೆ ಶ್ರದ್ಧೆ, ಭಕ್ತಿಯಿಂದ ನೆರವೇರಿತು.
ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಡಾ. ಅಕ್ಕ ಅನ್ನಪೂರ್ಣ ತಾಯಿ ಅವರು ಸಾಮೂಹಿಕ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು. ಅಷ್ಟವಿಧಾರ್ಚನೆ ಹಾಗೂ ಪ್ರಾಣಲಿಂಗಾರ್ಚನೆಯ ಮಹತ್ವ ವಿವರಿಸುತ್ತಲೇ, ವಿಧಿ- ವಿಧಾನಗಳನ್ನು ಹೇಳಿಕೊಟ್ಟರು.
ನೆರೆದ ಶರಣ- ಶರಣೆಯರು ಏಕಾಗ್ರತೆಯಿಂದ ಲಿಂಗ ಪೂಜೆಯಲ್ಲಿ ತಲ್ಲೀನರಾಗಿ, ದಿವ್ಯಾನಂದದಲ್ಲಿ ಓಲಾಡಿದರು.
ಆಶೀರ್ವಚನ ನೀಡಿದ ಡಾ. ಅಕ್ಕ ಅನ್ನಪೂರ್ಣ ತಾಯಿ ಅವರು, ಸಾಮೂಹಿಕ ಪೂಜೆಯಲ್ಲಿ ಅದ್ಭುತ ಶಕ್ತಿ ಇದೆ. ಮನುಷ್ಯ ತನ್ನ ಬಯಕೆ, ಆಸೆ, ಸುಖ, ದುಃಖಗಳನ್ನೆಲ್ಲ ಲಿಂಗಯ್ಯನಿಗೆ ಸಮರ್ಪಿಸಿ ನಿರಾಳವಾಗಿ ಬದುಕಲು ಸಾಧ್ಯವಿದೆ. ಸಮರ್ಪಣೆ ಭಾವದಿಂದ ಪೂಜಿಸಿ, ಧ್ಯಾನಿಸಿದರೆ, ದೈವಿಕಾರುಣ್ಯ ಇಳಿದು ಬರುತ್ತದೆ ಎಂದು ಹೇಳಿದರು.
ಶಿವ ಎಂದರೆ ಬೆಳಕು, ಮಂಗಲ, ಶುಭ ಎಂದರ್ಥ. ಜೀವನದ ಕತ್ತಲೆಯನ್ನು ಹೊಡೆದೋಡಿಸುವುದೇ ಶಿವರಾತ್ರಿ. ಶರಣ ಧರ್ಮದಲ್ಲಿ ನಿತ್ಯ ಶಿವರಾತ್ರಿಯೇ ಆಗಿದೆ. ಕಾರಣ, ದಿನಾಲೂ ಇಷ್ಟಲಿಂಗ ಪೂಜೆಗೈದು ಧನ್ಯರಾಗಬೇಕು ಎಂದು ನುಡಿದರು.
ಪ್ರಭುದೇವರು ನೇತೃತ್ವ ವಹಿಸಿದ್ದರು. ಶರಣಬಸವ ಮಠಪತಿ, ಜಯರಾಜ ಖಂಡ್ರೆ, ರಾಜಕುಮಾರ ಪಾಟೀಲ, ಹಾವಯ್ಯ ಸ್ವಾಮಿ, ಅಶೋಕ ಎಲಿ, ಸಿ.ಎಸ್. ಗಣಾಚಾರಿ, ನೀಲಮ್ಮ ರೂಗನ್, ಶಾಮಲಾ ಎಲಿ, ಪ್ರಭಾವತಿ ನಂದಿ, ಸಾವಿತ್ರಿ ಮಹಾಜನ್, ಉಮಾ ಚಿಲ್ಲರ್ಗಿ, ಡಾ. ದೇವಕಿ ನಾಗೂರೆ ಅತಿಥಿಯಾಗಿದ್ದರು.
ಬಸವಗಿರಿಯ ಸಾಧಕರಾದ ಚನ್ನಬಸವಣ್ಣ, ಅಜಗಣ್ಣ ತಂದೆ ಸಮ್ಮುಖ ವಹಿಸಿದ್ದರು. ಅಶ್ವಿನಿ ರಾಜಕುಮಾರ ಹಾಗೂ ವೈಜಿನಾಥ ಸಜ್ಜನಶೆಟ್ಟಿ ವಚನ ಗಾಯನಗೈದರು. ನೃತ್ಯಾಂಗನಾ ನೃತ್ಯಾಲಯದ ವಿದ್ಯಾರ್ಥಿಗಳು ಪೂರ್ಣಚಂದ್ರ ಅವರ ನಿರ್ದೇಶನದಲ್ಲಿ ವಚನ ನೃತ್ಯ ಪ್ರಸ್ತುತಪಡಿಸಿದರು.
ಲಿಂಗಾಯತ ಸೇವಾ ದಳದ ಅಧ್ಯಕ್ಷ ಅಭಿಷೇಕ ಮಠಪತಿ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು. ಕಾರ್ಯದರ್ಶಿ ಓಂಪ್ರಕಾಶ ಕೌಟೆ ವಂದಿಸಿದರು. ಭಕ್ತಿಯ ಓಘದಲ್ಲಿ ಶರಣ ಸಮೂಹ ಹಾಡಿ, ಕುಣಿದು ಸಂಭ್ರಮಿಸಿತು.