ಗುಡಿಬಂಡೆ : ಪ್ರತಿಭೆ ಯಾರ ಸ್ವತ್ತಲ್ಲ. ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಅಧ್ಯಯನದಲ್ಲಿ ತೊಡಗಿಸಿಕೊಂಡವರಿಗೆ ಯಶಸ್ಸು ಲಭಿಸುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಪಟ್ಟಣದ ಗಾಯಿತ್ರಿ ಪ್ರಸಾದ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸೂಲಿಬೆಲೆಯ ದೀಕ್ಷ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯೆ, ಬುದ್ಧಿ, ಸಂಸ್ಕೃತಿ, ಸಂಪತ್ತು ಗಳಿಸುವ ವ್ಯಕ್ತಿ ಸುಖಮಯದ ಜತೆಗೆ ಆರೋಗ್ಯಯುತವಾಗಿ ಬದುಕುತ್ತಾನೆ. ಮಕ್ಕಳ ಹಾಗೂ ದೇಶದ ಪ್ರಗತಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.ಶಿಕ್ಷಣ ಪಡೆಯುವ ಹಂತದಿಂದಲೇ ವಿದ್ಯಾರ್ಥಿಗಳು ಪರಿಶ್ರಮದಿಂದ ವ್ಯಾಸಂಗ ಮಾಡಿದರೆ ಸಾಧನೆ ಮಾಡಬಹುದು ಎಂದು ದೀಕ್ಷಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸೂಲಿಬೆಲೆ ದೇವರಾಜ್ ಹೇಳಿದರು.
ಶೇ.85 ಕ್ಕೂ ಹೆಚ್ಚು ಅಂಕ ಪಡೆದ 20ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕಿ ರೇಣುಕಾ, ತಹಸೀಲ್ದಾರ್ ಸಿಗ್ಬತ್‌ವುಲ್ಲಾ, ತಾಪಂ ಇಒ ಡಿ.ಎನ್.ರವೀಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಪಪಂ ಮುಖ್ಯಧಿಕಾರಿ ರಾಜಶೇಖರ್, ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಮುನಿಕೃಷ್ಣಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಟಿ. ವೇಣುಗೋಪಾಲ್ ರೆಡ್ಡಿ, ನೋಡಲ್ ಅಧಿಕಾರಿ ಜಿ.ವಿ. ಚಂದ್ರಶೇಖರ್, ತಾಲೂಕು ಆರೋಗ್ಯಧಿಕಾರಿ ನರಸಿಂಹಮೂರ್ತಿ ಇತರರಿದ್ದರು.