ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಮುಸ್ಲಿಮರು ಪವಿತ್ರ ರಂಜಾನ್ ಅಂಗವಾಗಿ ವಿವಿಧ ಮಸೀದಿಗಳಲ್ಲಿ ಶ್ರದ್ಧಾಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.
ಪಟ್ಟಣದಲ್ಲಿ ಹೊಸ ಉಡುಪುಗಳನ್ನು ತೊಟ್ಟು ಒಬ್ಬರಿಗೊಬ್ಬರು ಈದ್ ಉಲ್ ಫಿತರ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು ಸೋಮವಾರ ಮುಂಜಾನೆ ಕಂಡು ಬಂದಿತು.
ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್‌ನಲ್ಲಿ ಇಬ್ರಾಹಿಂ ಯಾಸನಿ, ಸುನ್ನಿ ಹನಫಿ ಮುಸ್ಲಿಂ ಜಮಾಅತ್ ಮೌಲನಾ ಜುಬೇರ್, ಸುನ್ನಿ ಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಮೌಲ್ವಿ ಉಸ್ಮಾನ್ ಫೈಝಿ, ಕೂಬ್ಬ ಮಸ್ಜಿದ್ ಮೌಲನಾ ಇನಾಂ, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ ಮುಸ್ಲಿಯರ್ ಅಬ್ದುಲ್ ಅಜೀಜ್ ಸಖಾಫಿ ಅವರು ಧಾರ್ಮಿಕ ಪ್ರವಚನ ಬಳಿಕ ಪ್ರಾರ್ಥನೆಯನ್ನು ಸಲ್ಲಿಸಿದರು.
ಕಳೆದ 30 ದಿನಗಳ ಉಪವಾಸದ ಅಂಗವಾಗಿ ಪ್ರತಿದಿನ ರಾತ್ರಿ ಮಸೀದಿಗಳಲ್ಲಿ ಮೌಲ್ವಿಗಳಿಂದ ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದರು. ಈದ್ ಉಲ್ ಫಿತರ್ ಅಂಗವಾಗಿ ಸೋಮವಾರ ಎಲ್ಲ ಜುಮ್ಮಾ ಮಸೀದಿಗಳಲ್ಲಿ ಪ್ರಾರ್ಥನೆ ಧಾರ್ಮಿಕ ಪ್ರವಚನದ ನಂತರ ಮುಸ್ಲಿಮರು ಒಬ್ಬರನ್ನೊಬ್ಬರು ಆಲಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಸಲಾಫಿ ಮಸೀದಿಯಲ್ಲಿ ರಂಜಾನ್ ಈದ್ ಉಲ್ ಫಿತರ್ ಅಂಗವಾಗಿ ಶಮೀರ್ ಮೌಲ್ವಿ ಪಾಲಕ್ಕಡ್ ಅವರು ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಪುರುಷರು, ಮಹಿಳೆಯರು, ಮಕ್ಕಳು ಒಗ್ಗೂಡಿ ಪ್ರಾರ್ಥನೆಯನ್ನು ಸಲ್ಲಿಸಿದರು. ಸುಂಟಿಕೊಪ್ಪ ಠಾಣಾಧಿಕಾರಿ ಜಗದೀಶ್ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವಹಿಸಿದ್ದರು.
ಚಿತ್ರ.1: ಸಲಾಫಿ ಮಸೀದಿಯಲ್ಲಿ ರಂಜಾನ್ ಈದ್ ಉಲ್ ಫಿತರ್ ಅಂಗವಾಗಿ ಶಮೀರ್ ಮೌಲವಿ ಪಾಲಕ್ಕಡ್ ಅವರು ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಿರುವುದು.