ಜಿಲ್ಲೆ

ಶ್ರದ್ಧಾ-ಭಕ್ತಿಯಿಂದ ಬಕ್ರೀದ್ ಆಚರಣೆ

ಕಲಬುರಗಿ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ನಗರ ಸೇರಿ ಜಿಲ್ಲಾದ್ಯಂತ ಶ್ರದ್ಧಾ, ಭಕ್ತಿಯಿಂದ ಮುಸ್ಲಿಮರು ಸೋಮವಾರ ಆಚರಿಸಿದರು.
ಬೆಳಗ್ಗೆಯಿಂದಲೇ ಶ್ವೇತ ವರ್ಣದ ಬಟ್ಟೆ ಧರಿಸಿದ್ದ ಜನರು ಮನೆ ಹಾಗೂ ಸಮೀಪದ ಜುಮ್ಮಾ ಮಸೀದಿ, ಈದ್ಗಾ ಮೈದಾನದಲ್ಲಿ ಈದುಲ್ ಅಝಾಹ್ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ನಗರದ ರಾಜಾಪುರದ ಈದ್ಗಾ ಮೈದಾನ, ಆಳಂದ ರಸ್ತೆಯಲ್ಲಿನ ಬಹುಮನಿ ಈದ್ಗಾ ಮೈದಾನ ಸೇರಿ ವಿವಿಧೆಡೆ ಬೆಳಗ್ಗೆ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನೆ (ನಮಾಜ್)ಯಲ್ಲಿ ಚಿಕ್ಕ ಮಕ್ಕಳು, ಹಿರಿಯರು ಸೇರಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಪ್ರಾರ್ಥನೆ ನಂತರ ಒಬ್ಬರಿಗೊಬ್ಬರು ಹಬ್ಬದ ಶುಭಾಶಯ ಕೋರಿದರು. ಪ್ರಾರ್ಥನೆ ನಂತರ ಮೌಲ್ವಿಗಳು ವಿಶೇಷ ಉಪನ್ಯಾಸ ನೀಡಿದರು.
ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಎಲ್ಲಡೆ ಕೆಎಸ್‌ಆರ್‌ಪಿ ತುಕಡಿ, ಹೋಮ್ ಗಾರ್ಡ್ಸ್, ಸಿವಿಲ್ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು.