ಚಿಕ್ಕಮಗಳೂರು: ಶೋಷಿತ ಸಮುದಾಯದ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರು ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಹಾಗೂ ನ್ಯಾಯವಾದಿ ಎಚ್.ಇ.ದೊಡ್ಡಯ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸ್ಮರಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲೆಯ ದಲಿತ ಸಂಘಟನೆಗಳು ಹಾಗೂ ಸಮಾನ ಮನಸ್ಕರ ವೇದಿಕೆಯಿಂದ ಆಯೋಜಿಸಲಾಗಿದ್ದ ಡಿಎಸ್‌ಎಸ್ ಸಂಘಟನಾ ಸಂಚಾಲಕ, ನ್ಯಾಯವಾದಿ ಎಚ್.ಇ.ದೊಡ್ಡಯ್ಯ ಅವರ ನುಡಿನಮನ ಕಾರ್ಯಕ್ರಮದಲ್ಲಿ ದೊಡ್ಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ದೊಡ್ಡಯ್ಯ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವು ನಿಸ್ವಾರ್ಥವಾಗಿ ಶೋಷಿತರ ಸೇವೆ ಮಾಡಬೇಕಿದೆ ಎಂದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ದಲಿತ ಪರ ಹೋರಾಟಗಾರರ ಬದುಕು ಬಹುತೇಕ ಕಷ್ಟದಲ್ಲಿದೆ. ಅವರ ಕುಟುಂಬಗಳು ಸಂಕಷ್ಟದಲ್ಲಿವೆ. ನಿಧನರಾದ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ಸಂಘ ಸಂಸ್ಥೆಗಳು ಕಷ್ಟದಲ್ಲಿರುವ ಅವರ ಕುಟುಂಬಕ್ಕೆ ನೆರವಿನ ಹಸ್ತ ಚಾಚಬೇಕು ಎಂದು ಸಲಹೆ ನೀಡಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ದೊಡ್ಡಯ್ಯ ಅವರ ನಿಧನದಿಂದಾಗಿ ದಲಿತ ಸಂಘಟನೆಗಳಿಗೆ ದಲಿತ ಪರ ಹೋರಾಟಕ್ಕೆ ಮತ್ತು ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ದೊಡ್ಡಯ್ಯ ಅವರ ಜನಪರ ಕಾಳಜಿ, ಹೋರಾಟ ಮರೆಯಲು ಸಾಧ್ಯವಿಲ್ಲ. ಹೋರಾಟಗಾರರು ಸಮುದಾಯದ ಚಿಂತನೆಯ ಜೊತೆ ಜೊತೆಗೆ ತಮ್ಮ ಆರೋಗ್ಯ ಮತ್ತು ಕುಟುಂಬದ ಕಡೆಗೂ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.
ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಬಹುಜನ ಸಮಾಜ ಪಕ್ಷ ಮತ್ತು ದಲಿತ ಸಂಘರ್ಷ ಸಮಿತಿಯೊಂದಿಗೆ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದ ದೊಡ್ಡಯ್ಯ ಅವರು ದಲಿತ ಸಮುದಾಯದ ಆಸ್ತಿ. ದೊಡ್ಡಯ್ಯ ಅವರ ಕುಟುಂಬಕ್ಕೆ ಎಲ್ಲರೂ ನೆರವಿನ ಹಸ್ತ ಚಾಚಬೇಕು. ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತಕುಮಾರ್ ಮಾತನಾಡಿ, ಹೋರಾಟಗಾರರು ನಿಧನರಾದಾಗ ಅವರ ಕುಟುಂಬಕ್ಕೆ ಸಂಘ ಸಂಸ್ಥೆಗಳು ಧನ ಸಹಾಯ ಮಾಡಬೇಕು. ಆ ನಿಟ್ಟಿನಲ್ಲಿ ನಿಧಿ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
ರೈತ ಸಂಘದ ಮುಖಂಡ ಗುರುಶಾಂತಪ್ಪ, ಕಾಂಗ್ರೆಸ್ ಮುಖಂಡ ಹಿರೇಮಗಳೂರು ರಾಮಚಂದ್ರ, ಎಸ್‌ಸಿ ಎಸ್‌ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಲಕ್ಷö್ಮಣ್, ದಲಿತ ಸಂಘಟನೆಗಳ ಮುಖಂಡರಾದ ವಿ. ಧರ್ಮೇಶ್, ಇಲಿಯಾಸ್ ಅಹಮದ್, ರಂಗಯ್ಯ, ಶ್ರೀನಿವಾಸ್, ಹಾಲಪ್ಪ, ಭೀಮಯ್ಯ, ಜಯರಾಮ್ ಮಾಸ್ಟರ್, ನ್ಯಾಯವಾದಿ ಪರಮೇಶ್, ಗಂಗಾಧರ್, ಸ್ವಾಮಿ, ಮರ್ಲೆ ಅಣ್ಣಯ್ಯ, ಮೋಹನ್ ಕುಮಾರ್, ಬಾಲಕೃಷ್ಣ, ಜವರಯ್ಯ, ರಘು ಮತ್ತಿತರರಿದ್ದರು.