ಜಿಲ್ಲೆ

ಶೋಷಿತರ ಪರ ನಿಂತ ಗಟ್ಟಿ ಧ್ವನಿಯ ದಿಟ್ಟ ನಾಯಕ ಅರಸು

ಯಳಂದೂರು: ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರೂ ಸೇರಿದಂತೆ ಬಡ ಶೋಷಿತ ಸಮಾಜಗಳ ದಿಟ್ಟ ನಾಯಕರಾಗಿದ್ದ ಡಿ. ದೇವರಾಜ ಅರಸು, ಇವರ ಉದ್ಧಾರಕ್ಕಾಗಿ ತೆಗದುಕೊಂಡ ದಿಟ್ಟ ಹೆಜ್ಜೆಗಳು ಇವರ ಗಟ್ಟಿ ಹೃದಯಕ್ಕೆ ಸಾಕ್ಷಿಯಾಗಿವೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬಣ್ಣಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಡಿ.ದೇವರಾಜು ಅರಸು ಅವರ 110 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದುಳಿದ ಸಣ್ಣ ಸಮುದಾಯಗಳ ಅಭಿವೃದ್ಧಿ, ಕಾರ್ಮಿಕರಿಗೆ ಕಾನೂನು, ಮಲ ಹೊರುವ ಅನಿಷ್ಠ ಪದ್ಧತಿ, ಕನಿಷ್ಠ ಕೂಲಿಯನ್ನು ನೀಡುವ ಕಾನೂನು, ಉಳುವವನಿಗೆ ಭೂಮಿ ಸೇರಿದಂತೆ ಅನೇಕ ಕ್ರಾಂತಿಕಾರಕ ಕಾನೂನುಗಳನ್ನು ರಚಿಸಿ ಆ ಮೂಲಕ ಸಂವಿಧಾನ ಬದ್ಧವಾಗಿ ಆಡಳಿತ ನಡೆಸಿದ ಮೊದಲು ಮುಖ್ಯಮಂತ್ರಿ ದೇವರಾಜು ಅರಸು ಆಗಿದ್ದಾರೆ. ಇವರ ಸಮಕಾಲೀನರಾಗಿ ಕೆಲಸ ಮಾಡಿದ ದಿ. ಬಿ. ರಾಚಯ್ಯ ಅವರೂ ಕೂಡ ಇವರ ಅಪ್ತ ವಲಯದಲ್ಲಿ ಕಾಣಿಸಿಕೊಂಡು ರಾಜ್ಯದ ಬಡ ರೈತರಿಗೆ ಭೂಮಿ ನೀಡುವ ಮೂಲಕ ಕ್ರಾಂತಿಯನ್ನು ಮಾಡಿದ್ದರು. ಇಂತಹ ಮಹಾನ್ ನಾಯಕರು ಇಂದಿಗೂ ಮಾದರಿಯಾಗಿ ನಿಲ್ಲುತ್ತಾರೆ ಎಂದರು.

ಸಾಹಿತಿ ಕಾಳಿಂಗಸ್ವಾಮಿ ಸಿದ್ಧಾರ್ಥ ಮಾತನಾಡಿ, ದೇವರಾಜು ಅರಸು ಮುಖ್ಯಮಂತ್ರಿ ಆಗುವ ಮುಂಚೆ 7 ಮುಖ್ಯಮಂತ್ರಿಗಳ ಆಡಳಿತ ಮಾಡಿ ಹೋಗಿದ್ದರು. ಆದರೆ ದಮನಿತ ವರ್ಗಗಳ ಮೊದಲ ಧ್ವನಿಯಾಗಿದ್ದು ಅರಸು ಅವರು ಮಾತ್ರ. ಹಾವನೂರು ವರದಿ ಜಾರಿ ಮಾಡುವ ಮೂಲಕ ಅಂದಿನ ಪ್ರಬಲ ಜಾತಿಯ ವಿರೋಧದ ನಡುವೆಯೂ ಸದ್ದಿಲ್ಲದೆ ಕೆಲಸವನ್ನು ಮಾಡಿ, ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿ, ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆದು, ವೃದ್ಧಾಪ್ಯ ವೇತನವನ್ನು ಮೊದಲ ಬಾರಿಗೆ ಜಾರಿಗೆ ತಂದು, ಭೂಸುಧಾರಣಾ ಕಾನೂನು ಜಾರಿಗೆ ತಂದು, ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಿ, 20 ಅಂಶಗಳ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿದ್ದ ಕೋಟ್ಯಂತರ ಕುಟುಂಬಗಳಿಗೆ ಆಸರೆಯಾಗಿ ನಿಂತ ಧೀಮಂತ ವ್ಯಕ್ತಿಯಾಗಿದ್ದಾರೆ. ಇವರ ಮಾರ್ಗದಲ್ಲೇ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಆದರೆ ಇಂದಿನ ರಾಜಕೀಯ ಸ್ಥಿತಿಗತಿಗಳು ಬೇರೆಯಾಗಿದೆ. ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಇವರ ಗ್ಯಾರಂಟಿಯ ಫಲವನ್ನು ಉಂಡವರೇ ಇದರ ಬಗ್ಗೆ ಹೆಚ್ಚು ಟೀಕಿಸುತ್ತಿದ್ದಾರೆ. ಜಾತಿ, ಧರ್ಮಗಳನ್ನು ಎತ್ತಿಕಟ್ಟುವ ಕೆಲಸವಾಗುತ್ತಿದೆ. ಇಂತಹ ಸುದ್ಧಿಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಒಳ್ಳೆ ಕೆಲಸಗಳನ್ನು ಪೋತ್ಸಾಹಿಸುವ ಮನಸ್ಸುಗಳು ಹೆಚ್ಚಾಗಬೇಕಿದೆ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಪಪಂ ಅಧ್ಯಕ್ಷೆ ಲಕ್ಷ್ಮೀಮಲ್ಲು, ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಬಿ. ರವಿ, ಸುಶೀಲಾಪ್ರಕಾಶ್, ಲಿಂಗರಾಜಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಶ್ವನಾಥ್, ತಾಲೂಕು ಕಲ್ಯಾಣಾಧಿಕಾರಿ ದಿಲೀಪ್, ವಿಸ್ತರಣಾಧಿಕಾರಿ ವಿನೋದ್‌ಕುಮಾರ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ತಹಸೀಲ್ದಾರ್ ಎಸ್.ಎಲ್. ನಯನಾ, ಬಿಇಒ ಮಾರಯ್ಯ, ಕುಮಾರ್, ಸೋಮು, ಮೆಹಬೂಬ್ ಸೇರಿದಂತೆ ಅನೇಕರು ಇದ್ದರು.