ಚಿತ್ರದುರ್ಗ: ಎಲ್ಲಾ ಜಾತಿಗಳಲ್ಲೂ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದವರೇ ಶೋಷಿತರಾಗಿದ್ದಾರೆ. ಅವರೆಲ್ಲರ ಅಭಿವೃದ್ಧಿ ಆಗಲು ಸಮಾವೇಶಗಳ ಆಗತ್ಯವಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟರು.
ಹೊರವಲಯದ ಮಾದಾರ ಚನ್ನಯ್ಯ ಗುರುಪೀಠದ ಸಮೀಪ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಜ. 28ರಂದು ನಡೆಯಲಿರುವ ಬೃಹತ್ ಜಾಗೃತಿ ಸಮಾವೇಶದ ವೇದಿಕೆ, ಪೆಂಡಾಲ್ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಈ ಜಿಲ್ಲೆಯಲ್ಲೂ ಶೋಷಿತ, ದಮನಿತ, ಅವಕಾಶ ವಂಚಿತ ಸಮುದಾಯ ಹೆಚ್ಚಾಗಿದೆ. ಸಮಾವೇಶದಲ್ಲಿ ಶೋಷಿತರ ಪರ ವಿವಿಧ ಹಕ್ಕು ಮಂಡಿಸಲಾಗುವುದು. ಅದನ್ನು ಸಿಎಂ ಸಾಕಾರಗೊಳಿಸುವ ವಿಶ್ವಾಸವಿದೆ ಎಂದರು.
ಶೋಷಿತ ವರ್ಗಗಳನ್ನು ಒಂದೆಡೆ ಸೇರಿಸುವ ಕಾರ್ಯ ಈ ಸಮಾವೇಶದ ಮೂಲಕ ಆಗಲಿದೆ. ಅದಕ್ಕಾಗಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಡಿಎಸ್‌ಎಸ್ ಮುಖಂಡ ಮಾವಳ್ಳಿ ಶಂಕರ್ ಸೇರಿ ಹಲವರು ಸಂಘಟನೆಯಲ್ಲಿ ನಿರತರಾಗಿದ್ದಾರೆ. ಉತ್ತಮ ಆಶಯದೊಂದಿಗೆ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಉತ್ತಮ ಮಾಹಿತಿಯುಳ್ಳ ಕಾಂತರಾಜ್ ಆಯೋಗದ ವರದಿ ಜಾರಿಯಾಗಬೇಕು. ಇದಕ್ಕಾಗಿ ಅನೇಕರು ಕೆಲಸ ಮಾಡಿದ್ದಾರೆ. ಇದರ ಕುರಿತು ಕೆಲವರಿಂದ ಅಪಸ್ವರವೂ ಕೇಳಿಬಂದಿದೆ. ಸರ್ಕಾರ ಸ್ವೀಕರಿಸಿ, ಚರ್ಚಿಸಿ, ಅದರೊಳಗೆ ತಪ್ಪುಗಳಿದ್ದರೆ ಸರಿಪಡಿಸಿ, ಸಣ್ಣ ಸಮುದಾಯಗಳಿಗೂ ಅಗತ್ಯ ಸೌಲಭ್ಯ ಸಿಗಬೇಕು ಎಂಬುದು ಒಕ್ಕೂಟದ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿದರು.
ಸಮಾವೇಶದ ಸಂಚಾಲಕ ಬಿ.ಟಿ.ಜಗದೀಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಅನೇಕ ಸಚಿವರು, ಶೋಷಿತ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ. ಜಿಲ್ಲೆ ಅಷ್ಟೇ ಅಲ್ಲದೆ, ವಿವಿಧೆಡೆ ಸಭೆ ನಡೆಸುವ ಮೂಲಕ ಶೋಷಿತ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಮಾಜಿ ಶಾಸಕ ಉಮಾಪತಿ, ಜಿಪಂ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ, ಮಾಜಿ ಸದಸ್ಯರಾದ ನರಸಿಂಹಮೂರ್ತಿ, ಪ್ರಕಾಶಮೂರ್ತಿ, ರಾಜಾನಾಯ್ಕ, ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ಎಚ್.ಮಂಜಪ್ಪ, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಕೃಷ್ಣಮೂರ್ತಿ, ಟಿಪ್ಪು ಖಾಸಿಂ ಆಲಿ, ಜಾಕೀರ್ ಹುಸೇನ್, ಲಕ್ಷ್ಮಿಕಾಂತ, ಪ್ರಕಾಶ್ ರಾಮ ನಾಯ್ಕ, ಮುದಸಿರ್, ಷಫಿವುಲ್ಲಾ, ರೆಹಮಾನ್ ಖಾನ್, ಮೂರ್ತಿ ಇತರರಿದ್ದರು.