ಚನ್ನರಾಯಪಟ್ಟಣ: ಮಹಿಳೆ ಆರ್ಥಿಕ ಸ್ವಾವಲಂಬನೆ ಹೊಂದಿದಾಗ ಮಾತ್ರವೇ ಶೋಷಣೆಯಿಂದ ಮುಕ್ತವಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ಏರ್ಪಡಿಸಿದ್ದ ಆರೋಗ್ಯದ ಅರಿವು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸುವಲ್ಲಿ ಪಾಲಕರ ಪಾತ್ರ ಕುರಿತು ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ದೇಶದ ಆರ್ಥಿಕತೆಯ ಬೆನ್ನೆಲುಬು ಮಹಿಳೆಯಾಗಿದ್ದು, ಮಹಿಳೆಯರ ಆರ್ಥಿಕ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಸ್ವಯಂ ಉದ್ಯೋಗ ಮತ್ತು ಉದ್ಯೋಗ ಕೌಶಲ ಹೆಚ್ಚಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳ ಸಹಭಾಗಿತ್ವ ಅಗತ್ಯ, ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಪಾಲಿಗೆ ವರವಾಗಿದೆ ಎಂದರು.
ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲು ಸಾಲ ಸೌಲಭ್ಯ ನೀಡಿದೆ, ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿ ಕೃಷಿ ತರಬೇತಿ, ಪರಿಕರಗಳ ವಿತರಣೆ, ವಿದ್ಯಾರ್ಥಿ ವೇತನ, ಮದ್ಯ ವರ್ಜನ ಶಿಬಿರ, ಪರಿಸರ ಕಾಳಜಿ, ಬೀಜ ಬಿತ್ತನೆ, ಬಡವರು ವಾಹನ ಖರೀದಿಸಲು ಸಾಲ ಸೌಲಭ್ಯ, ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ವಿತರಣೆ ... ಹೀಗೇ ಹತ್ತು ಹಲವು ಜನಪರ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಾ ಗ್ರಾಮೀಣ ಪ್ರದೇಶದ ಜನರಿಗೆ ಸಂಜೀವಿನಿಯಾಗಿದೆ ಎಂದರು.
ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಹೊಣೆಗಾರಿಕೆಯೂ ಮಹಿಳೆಯರ ಮೇಲಿದೆ. ಈ ದೇಶದ ಆಸ್ತಿಯಾಗಿರುವ ಸ್ತ್ರೀಶಕ್ತಿ ಕುಟುಂಬದ ದಾರಿದೀಪವಾಗಿರಬೇಕು. ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಬೇಕು. ಆರೋಗ್ಯಕ್ಕೂ ಆದ್ಯತೆ ನೀಡಿ ವಯಸ್ಸಿಗೆ ಅನುಗುಣವಾಗಿ ಚಟುವಟಿಕೆಯಲ್ಲಿ ತೊಡಗಬೇಕು. ಪೌಷ್ಟಿಕ ಆಹಾರ ಸೇವಿಸುವುದು. ನಿತ್ಯ ವ್ಯಾಯಾಮ, ಯೋಗಾಸನ, ಪ್ರಾಣಾಯಾಮ, ಧ್ಯಾನ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಮಾತನಾಡಿ, ನಮ್ಮ ಸಂಸ್ಕಾರ, ತಿಳಿವಳಿಕೆಗೆ ಬಡತನ ಬಂದಿದ್ದು, ಅದನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಸಾಗೋಣ, ದುಶ್ಚಟಗಳಿಂದ ದೂರ ಇರಬೇಕು. ಅದು ಮನುಷ್ಯನ ಜೀವನವನ್ನೇ ಸರ್ವನಾಶ ಮಾಡುತ್ತದೆ. ದುಶ್ಚಟಗಳಿಂದ ಮಾರಕ ರೋಗಗಳು ಕಾಡುತ್ತವೆ. ಅದರಿಂದ ಕುಟುಂಬದ ನೆಮ್ಮದಿ ಹಾಳಾಗುವುದು. ಅಲ್ಲದೇ ವ್ಯಕ್ತಿಯ ಗೌರವಕ್ಕೂ ಧಕ್ಕೆ ಉಂಟಾಗುತ್ತದೆ. ನಮ್ಮ ಸಮಾಜ ಹಾಗೂ ಸಂಸ್ಕೃತಿಯ ನಾಶಕ್ಕೆ ಕಾರಣವಾಗಿದೆ. ಬೇಡದ ವಸ್ತುಗಳನ್ನು ನಮ್ಮ ಮನೆಗೆ ಬಾರದಂತೆ ನೋಡಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞ ಡಾ.ರಮೇಶ್‌ಬಾಬು ಮಾತನಾಡಿ, ಪಾಲಕರಾಗಿ ಪ್ರತಿಯೊಬ್ಬ ತಂದೆ-ತಾಯಿಯೂ ತಮ್ಮ ಮಕ್ಕಳನ್ನು ಸಾಕಿ, ಸಲಹಿ, ಪೋಷಿಸಿ, ಕಾಳಜಿಯಿಂದ ಮಾರ್ಗದರ್ಶನ ನೀಡಿ, ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸಬೇಕು. ಮಕ್ಕಳ ಗುಣ ಹಾಗೂ ನಡತೆಯಿಂದ, ಪಾಲಕರ ಹಾಗೂ ಮಕ್ಕಳ ಸಂಬಂಧ ಹೇಗಿದೆಯೆಂದು ತಿಳಿಯುತ್ತದೆ. ಕಾರಣ ಮಕ್ಕಳು ನಾವು ಹೇಳಿಕೊಟ್ಟದ್ದನ್ನು ಕಲಿಯುವುದಕ್ಕಿಂತ ನಾವೇನು ಮಾಡುತ್ತೇವೋ ಅದನ್ನು ನೋಡಿ ಕಲಿಯುತ್ತಾರೆ. ಜೀವನದಲ್ಲಿ ಅನುಭವಗಳು ಮುಖ್ಯವಾಗಿದ್ದು, ಅನುಭವದ ಮಾತುಗಳನ್ನು ಅನುಸರಿಸಬೇಕು ಎಂದರು.
ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ.ಸೋಮನಾಥ್ ಮಕ್ಕಳ ಆರೋಗ್ಯದ ಬಗ್ಗೆ ತಾಯಂದಿರ ಪಾತ್ರ ಕುರಿತು ತಿಳಿಸಿದರು.
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಎನ್.ಅಶೋಕ್, ಪುರಸಭಾ ಮಾಜಿ ಸದಸ್ಯೆ ಸುಧಾ ಚಿಕ್ಕಣ್ಣ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಉಮೇಶ್, ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಪ್ರಸಾದ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಎಂ.ಸೌಮ್ಯಾ, ಮೇಲ್ವಿಚಾರಕರಾದ ಶಿಭಾ, ರಾಘವೇಂದ್ರ ಪೂಜಾರಿ, ಜ್ಞಾನ ವಿಕಾಸ ಸೇವಾ ಪ್ರತಿನಿಧಿಗಳು, ಸದಸ್ಯರು, ತಾಲೂಕಿನ ವಿವಿಧ ಸಹಾಯ ಸಂಘಗಳ ಪ್ರತಿನಿಧಿಗಳು, ಸದಸ್ಯರು ಭಾಗವಹಿಸಿದ್ದರು.