ಭಾಲ್ಕಿ: ಶೋಷಣೆಮುಕ್ತ ಸಮಾಜ ನಿರ್ಮಾಣ ಮಾಡುವುದೇ ಸಹಕಾರಿ ಸಂಘ ಸಂಸ್ಥೆಗಳ ಮೂಲ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರಿನ ನಿರ್ದೇಶಕ ಗುರುನಾಥ ಜಾಂತಿಕರ ಹೇಳಿದರು.
ಪಟ್ಟಣದ ಬಾಲಾಜಿ ಮಂದಿರದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೀದರ್ ಜಿಲ್ಲಾ ಸಹಕಾರ ಯೂನಿಯನ್, ಬೀದರ್ ಸಹಕಾರ ಇಲಾಖೆ, ಬೀದರ್ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ೨೦೨೪ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಸದ್ಯ ೮.೧೦ ಲಕ್ಷ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಲಿವೆ. ಈ ಎಲ್ಲ ಸಹಕಾರಿ ಸಂಸ್ಥೆಗಳು ದೇಶದ ವಿಕಸನಕ್ಕಾಗಿ, ದೇಶದಲ್ಲಿಯ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವುದು. ಕೌಶಲಾಭಿವೃದ್ಧಿ ಹೆಚ್ಚಿಸುವುದು ಸೇರಿ ದೇಶದ ಸಮಗ್ರ ವಿಕಾಸಕ್ಕಾಗಿ ದುಡಿಯುತ್ತಲಿವೆ. ಸರ್ಕಾರ ಮಾಡುವ ಹಲವಾರು ಕಾರ್ಯಗಳು ಸಹಕಾರ ಸಂಸ್ಥೆಗಳು ಮಾಡುತ್ತಲಿವೆ. ಒಟ್ಟಿನಲ್ಲಿ ಹುಟ್ಟಿನಿಂದ ಚಟ್ಟದ ವರೆಗೆ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಲಿವೆ ಎಂದು ಹೇಳಿದರು.
ಸಹಕಾರ ಸಂಘಗಳ ಇಲಾಖೆಯ ಸಹಾಯಕ ನಿಬಂಧಕಿ ಡಾ.ನಿಲಾಂಬಿಕಾ ಮಾತನಾಡಿ, ಸಹಕಾರಿಗಳಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚಿಸಬೇಕಾಗಿದೆ. ಹಲವಾರು ಸಹಕಾರಿ ಸಂಘಗಳಲ್ಲಿ ಕೋಟಿಗಟ್ಟಲೆ ಠೇವಣಿ ಹಣ ನಿಶ್ಚಿತ ಠೇವಣಿಯಲ್ಲಿ ಹಾಳಾಗಿವೆ. ಹಾಗಾಗಿ ಸಹಕಾರಿ ಸಂಸ್ಥೆಗಳಲ್ಲಿ ಠೇವಣಿ ಇಡಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರಕುಮಾರ ಖಂಡ್ರೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಜಿಲ್ಲಾ ಸಹಕಾರ ಸೌಹಾರ್ದ ಒಕ್ಕೂಟದ ನಿರ್ದೇಶಕ ಬಸವರಾಜ ಹುಡಗೆ ಅಧ್ಯಕ್ಷತೆ ವಹಿಸಿದ್ದರು. ಕರಾಸೌಸಂ ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ ರ‍್ಯಾಕಲೆ ವಿಶೇಷ ಉಪನ್ಯಾಸ ನೀಡಿದರು.
ರಾಜಶೇಖರ ನಾಗಮೂರ್ತಿ, ಸಂಜೀವಕುಮಾರ ಪಾಟೀಲ್, ಚಂದ್ರಶೇಖರ ವಂಕೆ, ಜಗನ್ನಾಥ ಕರಂಜೆ, ಮಾಯಾದೇವಿ ಸಿಂಧನಕೇರಾ, ನಾಗರಾಜ ಪಾಟೀಲ್, ಸಂಜಯ ಕ್ಯಾಸಾ, ರಮೇಶ ಚಿದ್ರಿ, ಶ್ರೀಕಾಂತ ಸ್ವಾಮಿ ಸೋಲಪೂರ, ಮಲ್ಲಿಕಾರ್ಜುನ ಕನಕಟ್ಟೆ ನಾವದಗಿ, ಕ್ರಾಂತಿಕುಮಾರ ಕುಲಾಲ, ರಮೇಶ ಗೊನ್ನಾಳೆ, ಅಮೃತ ಹೊಸಮನಿ, ಎಚ್.ಆರ್.ಮಲ್ಲಯ್ಯ ಇತರರಿದ್ದರು.
ಜಗನ್ನಾಥ ಕರಂಜೆ ಸ್ವಾಗತಿಸಿದರು. ಸತೀಶ ಪಾಟೀಲ್ ನಿರೂಪಣೆ ಮಾಡಿದರು. ಸಂಜೀವಕುಮರ ಸಜ್ಜನ ವಂದಿಸಿದರು.