ಬೆಂಗಳೂರು ಗ್ರಾಮಾಂತರ: ಬಡತನ ಮತ್ತು ಶೋಷಣೆ ವಿರುದ್ಧ ಸಿಡಿದೆದ್ದು ಕ್ರಾಂತಿಕಾರಿ ಹೋರಾಟ ಮಾಡಿದ ಜಗಜೀವನ ರಾಮ್ ಅವರು ಬಡವರು, ಶೋಷಿತರ ಪಾಲಿಗೆ ಆಶಾಕಿರಣರಾಗಿದ್ದರು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ದೇವನಹಳ್ಳಿ ತಾಲೂಕಿನ ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿಯಲ್ಲಿ ಮಾತನಾಡಿದರು.
ಬಾಬೂಜಿ ಬಾಲ್ಯದ ದಿನಗಳನ್ನು ಬಡತನ, ಶೋಷಣೆಯಲ್ಲೇ ಕಳೆದು, ಶೋಷಣೆ ವಿರುದ್ಧ ಹೋರಾಟ ಮಾಡಿ ವಿದ್ಯಾಭ್ಯಾಸ ಪೂರೈಸಿದರು. ಬ್ರಿಟಿಷ್ ಸರ್ಕಾರದ ವಿರುದ್ಧ ಕ್ರಾಂತಿಕಾರಿ ಹೋರಾಟ ಮಾಡಿ, ಅನ್ಯಾಯದ ವಿರುದ್ಧ ತಿರುಗಿಬಿದ್ದು ತುಳಿತಕ್ಕೆ ಒಳಾಗಾಗಿದ್ದವರಿಗೆ ನ್ಯಾಯ ದೊರಕಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸುದೀರ್ಘ ಕಾಲದವರೆಗೆ ದೇಶ ಸೇವೆ ಮಾಡಿ, ದೇಶ ಅಭಿವೃದ್ಧಿ ಪಥದತ್ತ ಸಾಗುವಲ್ಲಿ ಶ್ರಮಿಸಿದರು ಹಾಗೂ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಮತ್ತು ರೈತರು ಸ್ವಾವಲಂಬಿಗಳಾಗಲು ಉತ್ತೇಜನ ನೀಡಿದರು ಎಂದು ಹೇಳಿದರು.
ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದ ಇವರ ಸಾಧನೆ ಸ್ಮರಣಾರ್ಥ ಮೊದಲ ವಿದ್ಯುತ್‌ಚಾಲಿತ ರೈಲಿಗೆ ಇವರ ಹೆಸರನ್ನು ಇಡಲಾಗಿದೆ. ಇವರ ಜನ್ಮ ದಿನವನ್ನು ತನ್ಮಯಿ ದಿನವನ್ನಾಗಿ ಆಚರಿಸಲಾಗುತ್ತದೆ, ತನ್ಮಯಿ ಎಂದರೆ ಸಮಾನತೆಯ ಸೂಚಕ ಎಂದು ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಡಾ.ಬಾಬು ಜಗಜೀವನ ರಾಮ್ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರು ಬಾಲ್ಯದಲ್ಲೇ ಶೋಷಣೆಗೆ ಒಳಪಟ್ಟು ನೋವು, ಅನ್ಯಾಯ, ಅಸಮಾನತೆ, ಅಸ್ಪೃಶ್ಯತೆ ಅನುಭವಿಸಿ ಬೆಳೆದು ನಂತರ ಅನಿಷ್ಠ ಪದ್ಧತಿ ವಿರುದ್ಧ ಹೋರಾಟ ಮಾಡಿ ಮಹಾನ್ ವ್ಯಕ್ತಿಗಳಾದವರು ಎಂದರು.
ಬಾಬು ಜಗಜೀವನ ರಾಮ್ ಅವರ ತತ್ವಾದರ್ಶ ಪಾಲಿಸುವ ಜತೆಗೆ ಮುಂದಿನ ಪೀಳಿಗೆಗೂ ಪಾಲಿಸುವಂತೆ ಪ್ರೇರೇಪಿಸುವ ಅಗತ್ಯವಿದೆ. ಬಾಬಾ ಸಾಹೇಬ್ ಹಾಗೂ ಬಾಬೂಜಿ ಪ್ರಪಂಚಕ್ಕೆ ಸಲ್ಲುವಂತಹ ಮಹಾನ್ ವ್ಯಕ್ತಿಗಳು ಎಂದರು.
ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್ ಮಾತನಾಡಿ, ಸುಭದ್ರ ದೇಶ ಕಟ್ಟಿದ ವ್ಯಕ್ತಿಗಳ ಪೈಕಿ ಬಾಬು ಜಗಜೀವನ ರಾಮ್ ಅವರು ಮೊದಲ ಸಾಲಿನಲ್ಲಿರುತ್ತಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ನುಡಿಯಂತೆ ದೇಶದ ಉಪಪ್ರಧಾನಿಯಾಗಿ ರಕ್ಷಣೆ, ಕೃಷಿ ಹಾಗೂ ಇತರೆ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿ ಉತ್ತಮ ಆಡಳಿತವನ್ನು ನಡೆಸಿ ಮೆಚ್ಚುಗೆಗೆ ಪಾತ್ರರಾದವರು ಎಂದರು.
ಡಿಸಿ