ಚಿತ್ರದುರ್ಗ: ಶೋಷಣೆಗಳ ವಿರುದ್ಧ ತಲೆ ದನಿ ಎತ್ತುವ ಜವಾಬ್ದಾರಿ ಬರಹಗಾರರ ಮೇಲಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯ, ಬಂಡಾಯ ಸಾಹಿತಿ ಡಾ. ಎಲ್. ಹನುಮಂತಯ್ಯ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಸಿವಿಜಿ ಪಬ್ಲಿಕೇಷನ್ಸ್ ಸಹಯೋಗದೊಂದಿಗೆ ನಗರದ ಸರ್ಕಾರಿ ಕಲಾ ಕಾಲೇಜಲ್ಲಿ ಶನಿವಾರ ಪ್ರೊ.ಎಚ್.ಲಿಂಗಪ್ಪ ಅವರ 'ಬೆಳಕಿನ ತೋರಣ'ಆತ್ಮಕಥೆ ಗ್ರಂಥ ಅನಾವರಣಗೊಳಿಸಿ ಮಾತನಾಡಿದರು.
ಆಹಾರ ರಾಜಕೀಯ ಮನುಷ್ಯನ ದೈನಂದಿನ ಜೀವನದಲ್ಲಿ ಸೇರಬಾರದು ಎಂಬುದು ಅಹಿಂಸೆ ಸಂದೇಶ ಸಾರಿದ ಗೌತಮ ಬುದ್ಧನ ಆಶಯವಾಗಿತ್ತು. 12ನೇ ಶತಮಾನದಲ್ಲಿ ಮೊದಲು ಧ್ವನಿ ಎತ್ತಿದವರು ದಲಿತ ಲೇಖಕರು. ಕನ್ನಡ ಸಾಹಿತ್ಯದ ವಾತಾವರಣ ದಲಿತ ಕೇಂದ್ರಿತವಾಗಿದೆ ಎನ್ನುವುದು ಉತ್ಪ್ರೇಕ್ಷೆಯಲ್ಲ. ವಚನ ಸಾಹಿತ್ಯ ದಲಿತ ವಚನ ಸಾಹಿತ್ಯಕ್ಕೆ ಮಾರ್ಪಾಡು ಆಗಿರುವುದನ್ನು ಕಾಣುತ್ತಿದ್ದೇವೆ. ಪಾರಂಪರಿಕ ಕನ್ನಡ ಸಾಹಿತ್ಯಕ್ಕಿಂತ ದಲಿತ ಸಾಹಿತ್ಯ ಭಿನ್ನವಾದುದು ಎಂದರು.
ಕುವೆಂಪು ಆತ್ಮಕಥನ ಹೊರತುಪಡಿಸಿ ದಲಿತ ಆತ್ಮಕಥೆಗಳು ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಪಾತ್ರ ವಹಿಸಿವೆ. ವಿಶ್ವವಿದ್ಯಾನಿಲಯಗಳು ಜಾಸ್ತಿಯಾಗಿದ್ದರೂ ಸಂಶೋಧನೆಗಳ ಗುಣಮಟ್ಟ ಕಡಿಮೆಯಾಗಿದೆ. ಬರವಣಿಗೆ ಶಕ್ತಿ ಲಿಂಗಪ್ಪ ಅವರಲ್ಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಬಂಡಾಯ ಚಳವಳಿ ಕಟ್ಟಿದವರು ಅನೇಕರಿದ್ದಾರೆ. ಹಿಂದುಳಿದ ಜಿಲ್ಲೆಗಳಲ್ಲಿ ಜ್ಞಾನಕ್ಕೆ ದಾಹವಿರುತ್ತದೆ ಎಂದರು.
ಬಂಡಾಯ ಸಾಹಿತಿ ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಗ್ರಂಥ ಕುರಿತು ಮಾತನಾಡಿ, ಬರಹಗಾರರಿಗೆ ವಿಮರ್ಶೆ ಮಾಡುವವರ ಕೊರತೆಯಿದೆ. ಜಾಗತಿಕ ಮಟ್ಟದಲ್ಲಿ ಧರ್ಮಾಂಧತೆ ಪರಾಕಷ್ಟೆಗೆ ತಲುಪಿ ನೈತಿಕತೆ ಅಧಃಪತನಕ್ಕೆ ಬೀಳುತ್ತಿದೆ. ಆತ್ಮಕಥನಗಳ ಅವಲೋಕನದಲ್ಲಿ ಸತ್ಯವಿರಬೇಕು ಎಂದು ತಿಳಿಸಿದರು.
ಹಸಿವು, ಸಂಕಟ, ಅವಮಾನಗಳ ನಡುವೆ ಅಕ್ಷರ ದಾಹದ ಕಾರಣಕ್ಕೆ ಲಿಂಗಪ್ಪ ಅವರು ಇಂತಹ ಗ್ರಂಥ ಹೊರತಲು ಸಾಧ್ಯವಾಗಿದೆ. ಪ್ರೊ.ಬಿ. ಕೃಷ್ಣಪ್ಪ ಅವರ ಒಡನಾಡಿಯಾಗಿದ್ದು ಅನೇಕ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ಹೊಸ ಕೃತಿಗಳು ಬಂದಾಗ ಗಂಭೀರವಾಗಿ ಚರ್ಚಿಸಬೇಕಾದ ವಾತಾವರಣ ಇಲ್ಲದಿರುವುದು ನೋವಿನ ಸಂಗತಿ. ಲಿಂಗಪ್ಪ ಬುದ್ದ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರಜ್ಞೆ ಇಟ್ಟುಕೊಂಡು ಬರವಣಿಗೆ ಆರಂಭಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯ ಡಾ.ಕರಿಯಪ್ಪ ಮಾಳಿಗೆ, ಲೇಖಕ ಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಆಕಾಶವಾಣಿ ಶಿವಪ್ರಸಾದ್, ಡಾ. ಲೋಕೇಶ್‌ಅಗಸನಕಟ್ಟೆ, ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ, ಯಶೋದಕ ರಾಜಶೇಖರಪ್ಪ, ನಿವೃತ್ತ ಪ್ರಾಚಾರ್ಯ ಜೆ. ಯಾದವರೆಡ್ಡಿ, ರಂಗಸ್ವಾಮಿ ಸಕ್ಕರ, ಪರಮೇಶ್ವರಪ್ಪ, ಲಿಂಗಪ್ಪ ಅವರ ಕುಟುಂಬ ವರ್ಗದವರು ಇದ್ದರು.
ವಿಶ್ರಾಂತ ಪ್ರಾಚಾರ್ಯ ಶಿವಮೊಗ್ಗದ ಪ್ರೊ.ಟಿ.ಎಸ್. ಹೂವಯ್ಯಗೌಡ, ಸಿವಿಜಿ ಪಬ್ಲಿಕೇಷನ್ಸ್‌ನ ಡಾ. ಚನ್ನವೀರಗೌಡ, ಕವಿ ತೇಕಲವಟ್ಟಿಯ ಡಾ.ಟಿ.ಎಸ್. ರಾಜೇಂದ್ರಪ್ರಸಾದ್, ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರನ್ನು ಜೀವಮಾನ ಸಾಧನೆಗಾಗಿ ಸನ್ಮಾನಿಸಲಾಯಿತು.