ಬೀದರ್: ಗಾಳಿಯಲ್ಲಿ ಬಂದವರು ಗಾಳಿಯಲ್ಲೇ ಹೋಗುತ್ತಾರೆ ಎಂಬ ಹೇಳಿಕೆಯೊಂದಿಗೆ ಅಹಂಕಾರ ಮತ್ತು ದರ್ಪದ ವ್ಯಕ್ತಿತ್ವವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತ್ತೆ ಜನರಿಗೆ ತೋರಿಸಿದ್ದಾರೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕಿಡಿಕಾರಿದ್ದಾರೆ.
ಖೂಬಾ ಕುರಿತು ಗಾಳಿಯಲ್ಲಿ ಬಂದವರು ಗಾಳಿಯಲ್ಲಿ ಹೋಗುತ್ತಾರೆ ಎಂದು ಇತ್ತೀಚೆಗೆ ಸಚಿವ ಈಶ್ವರ ಖಂಡ್ರೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಖೂಬಾ, ತಂದೆ ಮತ್ತು ಸಹೋದರ ಹಾಕಿಕೊಟ್ಟ ರಾಜಕೀಯ ಬುನಾದಿ ಮೇಲೆ ಖಂಡ್ರೆ ಬೆಳೆದಿದ್ದಾರೆ. ಗುಂಡಾಗರ್ದಿ, ಶೋಷಣೆ, ದಬ್ಬಾಳಿಕೆ ಮಾಡಿ ನಾನು ರಾಜಕೀಯಕ್ಕೆ ಬಂದಿಲ್ಲ. ನಾನೊಬ್ಬ ರೈತನ ಮಗ. ಉದ್ಯೋಗ ಮಾಡುತ್ತ ಜೀವನ ರೂಪಿಸಿಕೊಂಡು ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬಂದಿರುವೆ ಎಂದು ಹೇಳಿದ್ದಾರೆ.
ನಿಮ್ಮಂತೆ (ಖಂಡ್ರೆ) ನನಗೆ ನೇರವಾಗಿ ವೇದಿಕೆಯಲ್ಲಿ ಸ್ಥಳ ಸಿಗಲಿಲ್ಲ. ಮೂರು ದಶಕ ಪಕ್ಷದ ವಿಚಾರಧಾರೆ, ತತ್ವ ಸಿದ್ಧಾಂತಗಳಿಗೆ ಬದ್ಧನಾಗಿ ಕೆಲಸ ಮಾಡಿರುವೆ. ವರಿಷ್ಠರು, ಕಾರ್ಯಕರ್ತರು ಮತ್ತು ಜನರ ಪ್ರೀತಿಗೆ ಪಾತ್ರನಾಗಿದ್ದರಿಂದ ಸಂಸದ ಸ್ಥಾನ ದೊರೆತಿದೆ. ಇಂಥ ಸೇವೆ ನೀಮಗೆಲ್ಲಿ ಅರ್ಥವಾಗಬೇಕು ಎಂದು ವ್ಯಂಗ್ಯವಾಡಿದ್ದಾರೆ.
ನರೇಂದ್ರ ಮೋದಿ ಗಾಳಿಯಲ್ಲಿ ಗೆದ್ದಿದ್ದು ನಿಜ. ಜಗಮೆಚ್ಚಿದ ನಾಯಕ ಮೋದಿ. ಸಂಸದನಾಗಿ ಮೋದಿ ಆಶಯದಂತೆ ಜನರ ನಡುವೆ ಇದ್ದು ಕಷ್ಟ-ಸುಖಗಳಿಗೆ ಸ್ಪಂದಿಸಿ, ಭ್ರಷ್ಟಾಚಾರರಹಿತ ಸೇವೆ, ಸ್ವಜನ ಪಕ್ಷಪಾತ, ಓಲೈಕೆ ರಾಜಕಾರಣರಹಿತ ಕೆಲಸ ಮಾಡುತ್ತಿರುವೆ. ಆದರೆ ನೀವು ವೋಟ್ ಬ್ಯಾಂಕ್, ಹಣ ಮತ್ತು ದಬ್ಬಾಳಿಕೆ ಮೇಲೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದೀರಿ. ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದ ನಿಮಗೆ ನಿಮ್ಮ ಪಕ್ಷದ ನಾಯಕನ ಹೆಸರು ಹೇಳಲು ನಾಚಿಕೆ ಯಾಕೆ ಎಂದು ಪ್ರಶ್ನಿಸಿದ್ದಾರೆ.
ನಾನು ನಿಮ್ಮಂತೆ ವಂಶಪಾರಂಪರಿಕ ರಾಜಕರಾಣ ಮಾಡಲು ಬಂದಿಲ್ಲ. ಈ ಹಿಂದೆ ನಿಮ್ಮ ತಂದೆ, ಸಹೋದರ, ಇದೀಗ ನೀವು, ಮುಂದೆ ನಿಮ್ಮ ಮಗ. ಒಟ್ಟಿನಲ್ಲಿ ನಿಮ್ಮ ಕುಟುಂಬ ಮಾತ್ರ ಅಧಿಕಾರದಲ್ಲಿ ಇರಬೇಕು. ಕಾಂಗ್ರೆಸ್ ಕಾರ್ಯಕರ್ತರಿಗೆ ನಾಯಕರಾಗುವ ಯೋಗ್ಯತೆ ಇಲ್ಲವಾ? ನಿಮ್ಮ ನಂತರ ಒಬ್ಬ ಕಾರ್ಯಕರ್ತನಿಗೆ ಶಾಸಕ ಮಾಡುವುದಾಗಿ ಘೋಷಿಸಿ ಬೆಳೆಸಿ. ಇನ್ನೆಷ್ಟು ದಿನ ನಿಮ್ಮ ಕುಟುಂಬವೇ ರಾಜಕಾರಣ ಮಾಡಬೇಕು. ನಿಮ್ಮ ಪಕ್ಷದ ಕಾರ್ಯಕರ್ತರು ಕೇವಲ ನಿಮಗಾಗಿ ದುಡಿಯಬೇಕಾ? ಅವರೇನು ನಿಮ್ಮ ಗುಲಾಮರಾ ಎಂದು ಖೂಬಾ ಪ್ರಕಟಣೆಯಲ್ಲಿ ಹರಿಹಾಯ್ದಿದ್ದಾರೆ.
ರಾಜಕಾರಣವೆಂದರೆ ಸಮಾಜಕಾರಣ ಎಂಬ ಸಂಕಲ್ಪದೊಂದಿಗೆ ಜನರ ಸೇವೆ ಮಾಡುತ್ತಿರುವೆ. ಎಷ್ಟು ಕಾಲ ಎನ್ನುವುದು ಮುಖ್ಯವಲ್ಲ, ಎಷ್ಟರ ಮಟ್ಟಿಗೆ ಸೇವೆ ಮತ್ತು ಅಭಿವೃದ್ಧಿ ಕಾರ್ಯ ಮಾಡುವೆ ಎಂಬುದು ಮುಖ್ಯ. ಇದು ತಮಗೆ ತಿಳಿದಿರಲಿ. ಅಧಿಕಾರಕ್ಕಾಗಿ ಜೋತು ಬೀಳುವ ಮತ್ತು ಅಧಿಕಾರ ಮಕ್ಕಳಿಗೆ ಹಸ್ತಾಂತರಿಸುವ ಸೀಮಿತ ರಾಜಕಾರಣ ನಾನು ಮಾಡುವುದಿಲ್ಲ ಎಂದು ಗುಡುಗಿದ್ದಾರೆ.
ಅಹಂಕಾರ ಸಂಸ್ಕೃತಿ ಕಾಂಗ್ರೆಸ್ ಸಿದ್ಧಾಂತ
ಕಾಂಗ್ರೆಸ್ನ ಮೂಲ ತತ್ವ-ಸಿದ್ಧಾಂತ ಅಹಂಕಾರದ ಸಂಸ್ಕೃತಿ ಮತು ಇತರರನ್ನು ಕನಿಷ್ಠವೆಂದು ಭಾವಿಸುವುದು ಆಗಿದೆ. ಈಶ್ವರ ಖಂಡ್ರೆ ಸಹ ವಂಶಪಾರಂಪರಿಕವಾಗಿ ಕಾಂಗ್ರೆಸ್ನಲ್ಲಿರುವ ಕಾರಣ ನನ್ನಂಥ ಕಾರ್ಯಕರ್ತನ ಹಂತದಿಂದ ಬೆಳೆದವನ ಬಗ್ಗೆ ಕೀಳಾಗಿ ನೋಡುವುದು ಸಹಜ ಗುಣ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಟಾಂಗ್ ನೀಡಿದ್ದಾರೆ. ದರ್ಪದ ಸಂಸ್ಕೃತಿ ಧಿಕ್ಕರಿಸುತ್ತೇನೆ. ಜನಸೇವೆಯೇ ನನ್ನ ತತ್ವ, ಸಿದ್ಧಾಂತ. ಟೀಕೆ, ಟಿಪ್ಪಣಿಗಳಿಗೆ ಕುಗ್ಗಲಾರದೆ ಸಂತೋಷದಿಂದ ಜನ ಸೇವೆಯಲ್ಲಿ ಇರುವೆ ಎಂದು ಹೇಳಿದ್ದಾರೆ.