ಚಿತ್ರದುರ್ಗ: ಕೋಟೆನಗರಿಯ ಹಿಂದು ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಅ. 8ರಂದು ನಡೆಯಲಿದ್ದು, ಸ್ವಾಮಿಯ ಮೂರ್ತಿ ವಿಸರ್ಜನಾ ಮೆರವಣಿಗೆ ಹಿನ್ನಲೆಯಲ್ಲಿ ನಗರಾದ್ಯಂತ ರಸ್ತೆ ಸಂಚಾರ ಮಾರ್ಗ ಬದಲಿಸಿ ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಆದೇಶ ಹೊರಡಿಸಿದ್ದಾರೆ.
ವಿಶ್ವ ಹಿಂದು ಪರಿಷದ್, ಬಜರಂಗದಳದಿಂದ ಪ್ರತಿಷ್ಠಾಪಿಸಿರುವ ಮಹಾಗಣಪನ ಶೋಭಾಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಸಾರ್ವಜನಿಕ ಸಂಚಾರ ಸುಗಮಗೊಳಿಸುವ ದೃಷ್ಟಿಯಿಂದ ಅಂದು ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ನಗರದ ಮುಖ್ಯರಸ್ತೆ, ಇತರೆ ಮಾರ್ಗಗಳಲ್ಲಿ ಸಂಚರಿಸಲಿರುವ ವಾಹನಗಳನ್ನು ಬದಲಿ ಮಾರ್ಗದಲ್ಲಿ ಸಂಚರಿಸಲು ಆದೇಶಿಸಿದ್ದಾರೆ.
ಮಾರ್ಗ ಬದಲಾವಣೆ: ಬಿ.ಡಿ.ರಸ್ತೆ, ಹೊಳಲ್ಕೆರೆ ರಸ್ತೆ ಮಾರ್ಗವಾಗಿ ಶೋಭಾಯಾತ್ರೆ ಸಾಗಲಿದ್ದು, ಜನದಟ್ಟಣೆ ಹೆಚ್ಚಾಗಲಿದೆ. ಹೀಗಾಗಿ ಬದಲಿ ಮಾರ್ಗದಲ್ಲಿ ಸಂಚರಿಸಬೇಕು. ನಗರದ ಚಳ್ಳಕೆರೆ ಗೇಟ್‌ನಿಂದ ಮಹಾತ್ಮಗಾಂಧಿ ವೃತ್ತ, ಹೊಳಲ್ಕೆರೆ ಮಾರ್ಗದ ಕಣಿವೆ ಕ್ರಾಸ್‌ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಬೆಂಗಳೂರು, ಚಳ್ಳಕರೆ, ಹೊಸಪೇಟೆ, ದಾವಣಗೆರೆ, ಶಿವಮೊಗ್ಗ, ಭೀಮಸಮುದ್ರ ಕಡೆಯಿಂದ ಬರುವ ಎಲ್ಲಾ ಮಾದರಿಯ ಲಘು ಮತ್ತು ಭಾರಿ ವಾಹನಗಳು, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿ 48 ರಸ್ತೆಯ ಮೂಲಕ ಮೆದೇಹಳ್ಳಿ ರಸ್ತೆ, ಜೆಎಂಐಟಿ ವೃತ್ತದ ಮೂಲಕ ನಗರಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸ್ ಸಂಚರಿಸುವಂತೆ ಆದೇಶಿಸಿದ್ದಾರೆ.
ಮದ್ಯ ಮಾರಾಟ ನಿಷೇಧ: ಶೋಭಾಯಾತ್ರೆ ಸಂಬಂಧ ಅಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಚಿತ್ರದುರ್ಗ ನಗರ, ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.