ಯಾದಗಿರಿ: ಯಾನಾಗುಂದಿಯಲ್ಲಿ ರೂಪರಹಿತ ಅಹಿಂಸಾ ಯೋಗೇಶ್ವರಿ ಮಾತಾ ಮಾಣಿಕೇಶ್ವರಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಭಾನುವಾರ ಗಿರಿ ಜಿಲ್ಲೆ ಶೋಕ ಸಾಗರದಲ್ಲಿ ಮುಳುಗಿತು. ನಗರದಲ್ಲಿ ಒಂದು ರೀತಿಯ ಅಘೋಷಿತ ಬಂದ್ ವಾತಾವರಣ ಕಂಡು ಬಂದಿತು.
ಜಿಲ್ಲೆಯಲ್ಲೂ ಅಮ್ಮನವರ ಅಪಾರ ಭಕ್ತರಿದ್ದು, ಮಾತೆ ಇನ್ನಿಲ್ಲದ ಸುದ್ದಿ ತಿಳಿದಾಕ್ಷಣ ಆಶ್ರಮಕ್ಕೆ ತಂಡೋಪತಂಡವಾಗಿ ತೆರಳಿ ಅಂತಿಮ ದರ್ಶನ ಪಡೆದುಕೊಂಡರು.
ಶಾಸಕ ನಾಗನಗೌಡ ಕಂದಕೂರ ಮಾತನಾಡಿ, ನಮ್ಮ ಭಾಗದ ನಡೆದಾಡುವ ದೇವರು, ವೀರಧರ್ಮಜ ಮಾತೆ ಮಾಣಿಕೇಶ್ವರಿ ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಕ್ಷಣಕಾಲ ಆಘಾತವಾಯಿತು. ಅಮ್ಮನವರು ಕರ್ನಾಟಕ ಸೇರಿ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ ಎಂದರು.
ಶಾಸಕರಾದ ವೆಂಕಟರಡ್ಡಿ ಮುದ್ನಾಳ್, ನರಸಿಂಹ ನಾಯಕ, ಶರಣಬಸಪ್ಪ ದರ್ಶನಾಪುರ, ಮಾಜಿ ಸಚಿವ ಡಾ.ಎ.ಬಿ. ಮಾಲಕರಡ್ಡಿ, ಮಾಜಿ ಶಾಸಕರಾದ ಡಾ.ವೀರಬಸವಂತರಡ್ಡಿ ಮುದ್ನಾಳ್, ಚನ್ನಾರಡ್ಡಿ ಪಾಟೀಲ್, ಗುರು ಪಾಟೀಲ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮನೇಗಾರ, ಜಿಪಂ ಮಾಜಿ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪುರ, ಪ್ರಮುಖರಾದ ಲಲಿತಾ ಅನಪುರ, ಶ್ರೀನಿವಾಸರಡ್ಡಿ ಕಂದಕೂರ, ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ರಾಜ್ಯ ಬಿಜೆಪಿ ಉಪಾದ್ಯಕ್ಷೆ ನಾಗರತ್ನ ಕುಪ್ಪಿ, ಚಂದ್ರಶೇಖರಗೌಡ ಮಾಗನೂರ, ನಗರಸಭೆ ಮಾಜಿ ಅಧ್ಯಕ್ಷೆ ನಾಗರತ್ನ ಅನಪುರ, ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ್ ಸಂತಾಪ ವ್ಯಕ್ತಪಡಿದ್ದಾರೆ.