ವಿಕ್ರಮ ನಾಡಿಗೇರ ಧಾರವಾಡ
ಇಲ್ಲಿಯ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ನೇಮಕಾತಿಗೆ ಶೋಧನಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ್ದ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯಪಾಲರು ತಿರಸ್ಕರಿಸಿರುವುದಾಗಿ ತಿಳಿದುಬಂದಿದೆ. ಇದರಿಂದ, ಸಮಿತಿ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಪರೋಕ್ಷವಾಗಿ ಅಭಿಪ್ರಾಯಪಟ್ಟಂತಾಗಿದೆ.
ಸುಮಾರು 16 ತಿಂಗಳಿಂದ ಕವಿವಿಗೆ ಕಾಯಂ ಕುಲಪತಿ ಇಲ್ಲ. ಕರೊನಾ ಹಾವಳಿ ಶುರುವಾಗಿದ್ದರಿಂದ ಶೋಧನಾ ಸಮಿತಿ ಸದಸ್ಯರು ಸಭೆ ನಡೆಸಲು ಸಹ ಸಾಧ್ಯವಾಗಿರಲಿಲ್ಲ. ನಂತರ ಡಾ. ಬಿ.ಎನ್.ಗಂಗಾಧರ ಅಧ್ಯಕ್ಷತೆಯ ಸಮಿತಿ ಆನ್ಲೈನ್ ಸಭೆ ನಡೆಸಿ ಮೂವರ ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದೆ.
ಆಗಸ್ಟ್ ಕೊನೇ ವಾರದಲ್ಲಿ ಪ್ರಾಧ್ಯಾಪಕರಾದ ಡಾ. ಎಸ್.ಎ. ಕೋರಿ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಕೆ.ಬಿ. ಗುಡಸಿ, ವಿಜ್ಞಾನ ವಿಭಾಗದ ಪ್ರೊ. ತಾರಾನಾಥ ಹೆಸರನ್ನು ಅಂತಿಮಗೊಳಿಸಿ ಪಟ್ಟಿ ಸಲ್ಲಿಸಿದ್ದರು.
ಕುಲಪತಿ ನೇಮಕ ಅಧಿನಿಯಮ 14.4ರ ಪ್ರಕಾರ ಅರ್ಹತೆ, ಸಮಾನತೆ, ಸಮದರ್ಶಿತ್ವ ಮತ್ತು ಸಾಮಾಜಿಕ ನ್ಯಾಯದ ಅಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಆದರೆ, ಈ ಎಲ್ಲ ಮಾನದಂಡ ಬದಿಗಿಟ್ಟು ಅಧ್ಯಕ್ಷರ ಏಕಪಕ್ಷೀಯ ನಿರ್ಧಾರ ಹಾಗೂ ಜಾತಿ ಆಧಾರದಲ್ಲಿ ಪಟ್ಟಿ ಸಿದ್ಧವಾಗಿದೆ ಎಂದು ಸಮಿತಿ ಸದಸ್ಯರೊಬ್ಬರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಪಾಲರ ಕಚೇರಿ ಶಿಫಾರಸನ್ನು ತಿರಸ್ಕರಿಸಲು ಇದೂ ಒಂದು ಕಾರಣ ಎಂದು ಹೇಳಲಾಗಿದೆ.
ಕುಲಪತಿ ಹುದ್ದೆಗೆ ಅನೇಕ ಅನುಭವಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಕೂಲಂಕಷವಾಗಿ ಪರಿಶೀಲಿಸಿಲ್ಲ. ಅಭ್ಯರ್ಥಿಗಳ ಮಾಹಿತಿ, ಸೇವಾ ಹಿರಿತನ, ಮೆರಿಟ್ ಸೇರಿ ಪ್ರಮುಖ ಮಾಹಿತಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅಧ್ಯಕ್ಷರು ಸಮಿತಿ ಗಮನಕ್ಕೆ ತರದೆ ಏಕಪಕ್ಷೀಯವಾಗಿ ತೀರ್ವನಿಸಿ, ಒಂದೇ ಸಮುದಾಯದ ಮೂವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಕುಲಪತಿ ವಿಚಾರದಲ್ಲಿ ಅರ್ಹತೆಗಿಂತ ಜಾತಿ ಲಾಬಿಗೆ ಮನ್ನಣೆ ನೀಡಲಾಗಿದೆ ಎಂದು ಸಮಿತಿ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಪಟ್ಟಿಗೆ ಸಹಿ ಮಾಡಲು ಸಹ ನಿರಾಕರಿಸಿದ್ದರು ಎನ್ನಲಾಗಿದೆ.
ಜಾತಿ ಲಾಬಿಗೆ ಮಣಿದು ಆಯ್ಕೆ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯಪಾಲರ ಕಚೇರಿ ತಿರಸ್ಕಾರ ಮಾಡಿರುವುದು ಸಮಿತಿಗೆ ತೀವ್ರ ಮುಖಭಂಗವಾದಂತಾಗಿದೆ. ಇನ್ನಾದರೂ ಶೋಧನಾ ಸಮಿತಿಯು ಕವಿವಿಗೆ ಕಾಯಂ ಕುಲಪತಿ ಇಲ್ಲದ್ದರಿಂದ ಉಂಟಾಗುತ್ತಿರುವ ತೊಂದರೆಯನ್ನು ಅನುಲಕ್ಷಿಸಬೇಕು. ಒತ್ತಡ/ಆಮಿಷಕ್ಕೆ ಒಳಗಾಗದೇ ಅರ್ಹರನ್ನು ಶಿಫಾರಸು ಮಾಡುವ ಮೂಲಕ ತನ್ನ ಘನತೆ ಉಳಿಸಕೊಳ್ಳಬೇಕು ಎಂಬ ಮಾತು ಕೇಳಿಬರುತ್ತಿದೆ.
ನಡೆದಿದೆಯಾ ಲಾಬಿ?: ಕವಿವಿ ಕುಲಪತಿ ನೇಮಕಾತಿಯಲ್ಲಿ ಲಾಬಿ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಕುಲಪತಿಯಾಗಲು 10 ವರ್ಷ ಪ್ರೊಫೆಸರ್ ಹುದ್ದೆ ನಿರ್ವಹಿಸಿರಬೇಕು. ಆದರೆ, ಉಪನ್ಯಾಸಕರಾದ ಡಾ. ಎಸ್.ಎ. ಕೋರಿ ಅವರ ಹೆಸರು ಸೇರ್ಪಡೆ ಮಾಡಿದ್ದಾರೆ. ಇದಲ್ಲದೆ ಅವರನ್ನು ಈಗಾಗಲೇ ಅನಂತಪುರ ಕೇಂದ್ರೀಯ ವಿವಿಗೆ ಕುಲಪತಿಯನ್ನಾಗಿ ನೇಮಿಸಲಾಗಿದೆ. ಆದಾಗ್ಯೂ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಲಾಬಿ ನಡೆದಿದೆ ಎಂಬುದಕ್ಕೆ ಪುಷ್ಟಿ ನೀಡುವಂತಿದೆ.
ರಾಜ್ಯಪಾಲರ ಭೇಟಿ ಇಂದು: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ವಿಳಂಬ, ಕವಿವಿ ಸಂಲಗ್ನ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಹಾಗೂ ಸಹಾಯಕ ಉಪನ್ಯಾಸಕರ ಕಾಯಮಾತಿ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಸರ್ವಾಂಗೀಣ ಸಂರಕ್ಷಣಾ ಟ್ರಸ್ಟ್ ನಿಯೋಗ ಸೆ. 26ರಂದು ರಾಜ್ಯಪಾಲರನ್ನು ಭೇಟಿ ಮಾಡಲಿದೆ. ಕುಲಪತಿ ಆಯ್ಕೆ ಸಮಿತಿಯ ಓರ್ವ ಸದಸ್ಯರಿಂದ ಸಾಮಾಜಿಕ ನ್ಯಾಯದ ತಿರಸ್ಕಾರದ ಕುರಿತು ಈಗಾಗಲೇ ಸರ್ಕಾರ ಹಾಗೂ ರಾಜ್ಯಪಾಲರು, ಯುಜಿಸಿಗೂ ದೂರು ನೀಡಲಾಗಿದೆ. ಆಯ್ಕೆ ಸಮಿತಿಯಲ್ಲಿಯ ಗುಂಪುಗಾರಿಕೆ, ಸಮಿತಿಯ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಮತ್ತು ಏಕಪಕ್ಷೀಯ ನಿರ್ಧಾರ, ಬೋಧಕೇತರ ಹುದ್ದೆಗಳ ನೇಮಕಾತಿ ಕುರಿತು ಮನವಿ ಸಲ್ಲಿಸಲಾಗುವುದು. ನಿಯೋಗದಲ್ಲಿ ಟ್ರಸ್ಟ್ ಅಧ್ಯಕ್ಷ ರಾಬರ್ಟ್ ದದ್ದಾಪುರಿ, ಪ್ರ. ಕಾರ್ಯದರ್ಶಿ ಆನಂದ ಜಾಧವ, ಇತರರು ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.