ಪ್ರೌಢಶಾಲಾ ಸಹಶಿಕ್ಷಕರ ಸಂಘ ನಿಪ್ಪಾಣಿ ತಾಲೂಕು ಘಟಕದಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಚಂದ್ರಕಾಂತ ಕೋಠಿವಾಲೆ, ಆರ್.ವೈ. ಪಾಟೀಲ, ರಾಮು ಗುಗವಾಡ ಇತರರಿದ್ದರು. 
ಜಿಲ್ಲೆ

ಶೈಕ್ಷಣಿಕ ಸೌಲಭ್ಯ ಎಲ್ಲರಿಗೂ ದೊರೆಯಲಿ

ನಿಪ್ಪಾಣಿ: ಅನುದಾನಿತ ಸಂಸ್ಥೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರ ಅನುಮೋದನೆ ನೀಡಬೇಕು. ತಾಂತ್ರಿಕ ಶಿಕ್ಷಣದಲ್ಲಿ ಸಿಇಟಿಯಿಂದದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಶೈಕ್ಷಣಿಕ ಸಾಲ ದೊರೆಯುತ್ತಿದ್ದು, ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಪಡೆಯುವ ಎಲ್ಲರಿಗೂ ಸೌಲಭ್ಯ ದೊರಕುವ ಕಾನೂನು ಜಾರಿಗೆ ತರಬೇಕು ಎಂದು ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಒತ್ತಾಯಿಸಿದರು.

ವಿದ್ಯಾ ಸಂವರ್ಧಕ ಮಂಡಳ ಹಾಗೂ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ತಾಲೂಕು ಘಟಕದಿಂದ ವಿಎಸ್‌ಎಂನಲ್ಲಿ ಈಚೆಗೆ ಏರ್ಪಡಿಸಿದ್ದ 2022ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶ ಕಟ್ಟುವಲ್ಲಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಕಾರ್ಯ ನಿರ್ವಹಿಸುವ ಶಿಕ್ಷಕರ ಒತ್ತಡಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಬೇಕು. ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಕರ ಒಳಿತಿಗಾಗಿ ಎಲ್ಲ ಸಂಸ್ಥೆಗಳು ಒಂದಾಗಿ ಸಂಘದ ಹೋರಾಟಕ್ಕೆ ಬೆಂಬಲ ನೀಡೋಣ ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಬೇಡ. ಎಲ್ಲ ಜನಪ್ರತಿನಿಧಿಗಳು ಒಗ್ಗೂಡಿ ರಾಜ್ಯದಲ್ಲಿ ಖಾಲಿ ಇರುವ 12 ಸಾವಿರಕ್ಕೂ ಅಧಿಕ ಅನುದಾನಿತ ಹುದ್ದೆಗಳಿಗೆ ಮತ್ತು ಶಾಲಾ ನಿರ್ವಹಣಾ ವೆಚ್ಚಕ್ಕೆ ಅನುಮೋದನೆ ನೀಡಿ ಅನುದಾನಿತ ಶಾಲಾ ಸಂಸ್ಥೆಗಳಿಗೆ ಸಹಕರಿಸಬೇಕು. ಸರ್ಕಾರವು ಶಿಕ್ಷಕೇತರ ಹುದ್ದೆಗಳಿಗೂ ಅನುಮೋದನೆ ನೀಡಿದರೆ ಶಾಲಾ ಮುಖ್ಯಸ್ಥರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಮಂಡಳದ ಮುಖ್ಯ ಕಾರ್ಯನಿರ್ವಾಹಕ ಡಾ. ಸಿದ್ಧಗೌಡ ಪಾಟೀಲ ಮಾತನಾಡಿ, ಇಂದಿನ ದಿನಮಾನಗಳಲ್ಲಿ ನೆಟ್-ಸೆಟ್, ಪಿಎಚ್.ಡಿ ಪದವಿ ಪಡೆದ ಅನೇಕ ಅಭ್ಯರ್ಥಿಗಳಿಗೆ ತರಕಾರಿ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಅರ್ಹ ಅಭ್ಯರ್ಥಿಗಳ ಒಳಿತಿಗಾಗಿ ಸರ್ಕಾರ ಯೋಜನೆ ರೂಪಿಸಬೇಕು.ಕಲಿತ ವಿದ್ಯೆಗೆ ಬೆಲೆ ಸಿಗಬೇಕು. ಆ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಎಲ್ಲ ರಂಗಗಳಲ್ಲೂ ಆಗ್ಬೇಕು ಎಂದು ಅಭಿಪ್ರಾಯಪಟ್ಟರು. ಮಂಡಳದಉಪಕಾರ್ಯಾಧ್ಯಕ್ಷ ಆರ್.ವೈ.ಪಾಟೀಲ, ಸಂಚಾಲಕ ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಸಂಘದ ಜಿಲ್ಲಾ ಅಧ್ಯಕ್ಷ ಜಿನೇಂದ್ರ ನಿಲಜಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಂ ಅಲಿ ಫೀರಜಾದೆ, ತಾಲೂಕು ಅಧ್ಯಕ್ಷ ಜಿನೇಂದ್ರ ಪಾಟೀಲ, ಸದಸ್ಯ ರಾವಸಾಹೇಬ ಜನವಾಡೆ, ಮೊಹಮ್ಮದ್ ಆಜಂ ಉಸ್ತಾದ್ ಇದ್ದರು. ತೇಜಸ್ವಿ ಬೆಳಗಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.