ಬೀದರ್: 2022-23ನೇ ಸಾಲಿನಲ್ಲಿ ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಸಿದ ಕಾರ್ಮಿಕರ ಮಕ್ಕಳಿಗೆ ಕೂಡಲೇ ಶೈಕ್ಷಣಿಕ ಸಹಾಯ ಧನ ಬಿಡುಗಡೆ ಮಾಡಬೇಕು ಎಂದು ಬೀದರ್ ಜಿಲ್ಲೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಒಕ್ಕೂಟ ಆಗ್ರಹಿಸಿದೆ.
ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ನೋಂದಾಯಿತ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ನವೀಕರಣಕ್ಕೆ ವೇತನ ಚೀಟಿ ಹಾಗೂ ಹಾಜರಾತಿ ಪಟ್ಟಿ ಕಡ್ಡಾಯ ಆದೇಶ ಹಿಂಪಡೆಯಬೇಕು. ನೈಜ ಕಾರ್ಮಿಕರಿಗೆ ಮಾತ್ರ ಗುರುತಿನ ಚೀಟಿ ನೀಡಬೇಕು. ಖೊಟ್ಟಿ ಕಾರ್ಮಿಕರ ಗುರುತಿನ ಚೀಟಿ ನಿಯಂತ್ರಿಸಲು ಗ್ರಾಮ ಒನ್, ಸೇವಾ ಸಿಂಧು ಕೇಂದ್ರಗಳಲ್ಲಿ ಹೆಸರು ನೋಂದಣಿ ಹಾಗೂ ನವೀಕರಣ ಸ್ಥಗಿತಗೊಳಿಸಬೇಕು. ಹೊಸ ತಂತ್ರಾಂಶ ಸಿದ್ಧಪಡಿಸಿ, ನೋಂದಾಯಿತ ಕಾರ್ಮಿಕ ಸಂಘಗಳಿಗೆ ನೋಂದಣಿಗೆ ಅವಕಾಶ ಕೊಡಬೇಕು. ಕಾರ್ಮಿಕ ಕಲ್ಯಾಣ ಮಂಡಳಿಯು ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿಗೆ ಒದಗಿಸಿದ ಅನುದಾನದಲ್ಲಿ ನಿಜವಾದ ಕಾರ್ಮಿಕಲ್ಲದವರಿಗೆ ಮನೆ ಮಂಜೂರು ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕ ಕಾಯ್ದೆಯಡಿ ನೋಂದಣಿಯಾದ ಸಂಘಟನೆಗಳಿಗೆ ಪ್ರಾತಿನಿಧ್ಯ ಕೊಡಬೇಕು. ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಪಂಢರಿ ಪೂಜಾರಿ, ಅಧ್ಯಕ್ಷ ಸೂರ್ಯಕಾಂತ ಸಾಧುರೆ, ಉಪಾಧ್ಯಕ್ಷ ಯೇಸುದಾಸ ಬೆಳ್ಳೂರ, ಪ್ರಧಾನ ಕಾರ್ಯದರ್ಶಿ ತುಕಾರಾಮ ಗೌರೆ, ಕಾರ್ಯದರ್ಶಿ ಅಶೋಕ ವಗ್ಗೆ, ಕೋಶಾಧ್ಯಕ್ಷ ಅನಿಲಕುಮಾರ ಗಂಜಕರ್, ಸಂತೋಷ ಶಿಂಧೆ, ಶಿವರಾಜ ಜಮಿಸ್ತಾನಪುರ, ರಾಜಕುಮಾರ ಕಾಂಬಳೆ, ಧನರಾಜ ದೊಡ್ಡಿ, ಬಾಬು ದಯಾಸಾಗರ್, ಶೀಕಾಂತ, ಪ್ರಭುರಾವ್ ಬಾಚೆಪಳ್ಳಿ, ನಜೀರ್ ಮೇಸ್ತ್ರಿ ಇದ್ದರು.