ಜಿಲ್ಲೆ

ಶೈಕ್ಷಣಿಕ ಸಮಸ್ಯೆಗಳ ಮಾಹಿತಿ ನೀಡಿದರೆ ಇತ್ಯರ್ಥ

ಅರಕೇರಾ: ಶೈಕ್ಷಣಿಕ ಹಂತದಲ್ಲಿ ಮಕ್ಕಳು ಹಕ್ಕುಗಳನ್ನು ಪಡೆಯುವ ಮೂಲಕ ಸ್ವತಂತ್ರವಾಗಿ ಬದುಕಬೇಕು ಎಂದು ಪಿಡಿಒ ನಾಗೇಂದ್ರ ಹೇಳಿದರು.

ಮುಷ್ಟೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಪಂ, ಕ್ರೈ ಸಂಸ್ಥೆ, ಶೃತಿ ಸಂಸ್ಕೃತಿ ಸಂಸ್ಥೆ ಹಾಗೂ ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಮಕ್ಕಳು ಶೈಕ್ಷಣಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯ ಗ್ರಾಪಂಗೆ ಮಾಹಿತಿ ನೀಡಬೇಕು. ಒಂದೇ ಬಾರಿಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ಹಂತ ಹಂತವಾಗಿ ಇತ್ಯರ್ಥಪಡಿಸಲಾಗುವುದು ಎಂದರು.

ಶಾಲೆಗಳಲ್ಲಿ ಮೈದಾನ ಸಮತಟ್ಟು ಮಾಡಬೇಕು. ಶಾಖಾಪುರ ರಸ್ತೆ ದುರಸ್ತಿ ಮಾಡಬೇಕು. ಗ್ರಂಥಾಲಯದಲ್ಲಿ ಮೂಲ ಸೌಕರ್ಯಗಳ ಕೊರತೆ ನಿವಾರಣೆ, ವಿದ್ಯುತ್ ಸಂಪರ್ಕ ಕಲ್ಪಿಸುವುದರೊಂದಿಗೆ ಪ್ರಚಲಿತ ವಿದ್ಯಾಮಾನಗಳ ಪುಸ್ತಕಗಳನ್ನು ನೀಡಬೇಕು. ಶಿವಂಗಿ ಪ್ರೌಢ ಶಾಲೆಯಲ್ಲಿ ಭೋಜನಾಲಯ ಇಲ್ಲ. ಇದರಿಂದಾಗಿ ಶಾಲೆಯ ಮೈದಾನದಲ್ಲಿ ಕುಳಿತು ಬಿಸಿಯೂಟ ಸೇವಿಸಬೇಕಿದೆ ಎಂದು ವಿದ್ಯಾರ್ಥಿಗಳು ದೂರಿದರು.

ಶಾಲೆಗೆ ಗೇಟ್ ಅಳವಡಿಸುವುದರೊಂದಿಗೆ ಆಟದ ಮೈದಾನದ ವ್ಯವಸ್ಥೆ ಬೇಕು. ಜರದಬಂಡಿ ಶಾಲೆಯಲ್ಲಿ ಶೌಚಗೃಹ ಕೊರತೆ ಇದೆ. ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಹಾಗೂ ಶುದ್ಧ ಕುಡಿಯುವ ನೀರು ಹಾಗೂ ಅಡುಗೆಗೆ ನೀರಿನ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಗೇಟ್ ಇಲ್ಲದಿರುವುದರಿಂದ ದನ-ಕರುಗಳು ಒಳಗೆ ಪ್ರವೇಶಿಸುತ್ತವೆ. ತಟ್ಟೆ, ಗ್ಲಾಸ್ ನೀಡಬೇಕು. ಕೊಠಡಿಗಳ ಬಾಗಿಲು ಸರಿಪಡಿಬೇಕು. ಶಾಲೆಗಳಿಗೆ ಬೆಂಚ್ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳಾದ ನಿವೇದಿತಾ, ಶ್ವೇತಾ, ಸಿಂಚನಾ, ಸುರೇಶ, ಅನಿಲ್ ಕುಮಾರ ಒತ್ತಾಯಿಸಿದರು.

ಶೃತಿ ಸಂಸ್ಕೃತಿ ಸಂಸ್ಥೆ ನಿರ್ದೇಶಕ ಡಿಂಗ್ರಿ ನರಸಪ್ಪ, ಅಂಗನವಾಡಿ ಮೇಲ್ವಿಚಾರಕಿ ಕಮಲಾಕ್ಷಿ, ಪ್ರಮುಖರಾದ ಆನಂದ, ವೆಂಕಟಾಚಲಪತಿ, ರುದ್ರಪ್ಪ, ಶರಣಗೌಡ, ಶಿವಲೀಲಾ, ಮಲ್ಲಪ್ಪ ರೆಡ್ಡೆಪ್ಪ, ರವಿ ನಾಯಕ, ಬಸವರಾಜ ನಾಯಕ, ನೌಶಾದ್, ರಾಮಣ್ಣ ಎನ್.ಗಣೇಕಲ್, ಮಲ್ಲಯ್ಯ ಖಾನಾಪುರ, ದೀಪಾ ಇತತರಿದ್ದರು.