ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಮೇ 16ರಿಂದ ಶಾಲೆ ಪುನರಾರಂಭದ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ ಶಾಲೆಗಳ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.
ಕರೊನಾ ಕಾರಣದಿಂದ ವರ್ಷದ ಕೊನೆಯಲ್ಲಿ ಶಾಲೆಗಳು ಆರಂಭವಾದರೂ ಕರೊನಾ ಆತಂಕದ ಕಾರಣ ಭಾಗಶಃ ಮಕ್ಕಳು ಗೈರಾಗಿದ್ದರು. ಪ್ರಸ್ತುತ ಜಿಲ್ಲೆಯಲ್ಲಿ ಕರೊನಾ ಶೂನ್ಯದಲ್ಲಿದ್ದು, ವಿದ್ಯಾರ್ಥಿಗಳನ್ನು ಸ್ವಾಗತಿಸಲು ಇಲಾಖೆ ಸಜ್ಜುಗೊಂಡಿದೆ.
ಇಂದು ಟೀಚರ್ಸ್ ಮೀಟಿಂಗ್: ಮೇ 16ರಂದು ಶಾಲೆಗಳು ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಮೇ 14ರಂದು ಜಿಲ್ಲೆಯ ನಾಲ್ಕೂ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲ ಸರ್ಕಾರಿ ಶಿಕ್ಷಕರ ವಿಶೇಷ ಸಭೆ ಕರೆಯಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷ ಆರಂಭಿಸುವುದು, ಹೊಸ ಪ್ರಯೋಗಗಳ ಮೂಲಕ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು, ಶಾಲೆಗಳಲ್ಲಿ ಮೂಲಸೌಲಭ್ಯ ಮಾಹಿತಿ ಸೇರಿ ಇನ್ನಿತರ ಮಹತ್ತರ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಬಿಇಒಗಳು ಹಾಗೂ ಶಿಕ್ಷಕರ ಅಭಿಪ್ರಾಯ ಸಂಗ್ರಹ, ಸಲಹೆ ಸೂಚನೆಗಳ ಪಟ್ಟಿ ತಯಾರಿಸುವ ಬಗ್ಗೆ ಸಭೆ ಕರೆಯಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ತಿಳಿಸಿದ್ದಾರೆ.
15ಕ್ಕೆ ಶ್ರಮದಾನ: ಶಾಲೆ ಆರಂಭಕ್ಕೆ ಮುನ್ನ ದಿನವಾದ ಮೇ 15ರಂದು ಎಲ್ಲ ಶಾಲೆಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಕೆಲವು ಶಾಲೆಗಳಿಗೆ ಸುಣ್ಣಬಣ್ಣ ಬಳಿಯುವುದು, ಸಣ್ಣಪುಟ್ಟ ರಿಪೇರಿ ಕೆಲಸಗಳು, ಶೌಚಗೃಹ, ನೀರಿನ ವ್ಯವಸ್ಥೆ ಸರಿಪಡಿಸುವುದು ಸೇರಿ ಎಲ್ಲ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವ ಕಾರ್ಯಕ್ರಮ ನಡೆಯಲಿದೆ. ಹಾಗೆಯೇ ಅಂದು ಎಸ್‌ಡಿಎಂಸ್ ಸದಸ್ಯರ ಸಭೆಯನ್ನು ಕರೆಯಲಾಗಿದೆ ಎಂದು ಇಲಾಖೆ ತಿಳಿಸಿದೆ.
ಗುಲಾಬಿ ನೀಡಿ ಸ್ವಾಗತ: 16ರಂದು ಶಾಲೆಗೆ ಬರುವ ಮಕ್ಕಳಿಗೆ ಗುಲಾಬಿ ನೀಡಿ ಸ್ವಾಗತಿಸಲು ಇಲಾಖೆ ಸಿದ್ಧತೆ ನಡೆಸಿದೆ, ಅಂದು ಎಲ್ಲ ಮಕ್ಕಳಿಗೂ ಸಿಹಿ ಹಂಚಿ ಸಾಧ್ಯವಾದರೆ ಬಿಸಿಯೂಟದಲ್ಲಿ ಸಿಹಿ ಉಪಾಹಾರ ಸೇರಿ ಶಿಕ್ಷಕರು ಮಕ್ಕಳೊಂದಿಗೆ ಕುಳಿತು ಸಹಭೋಜನ ಮಾಡಲು ಉದ್ದೇಶಿಸಲಾಗಿದೆ, ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಾಣ ಮಾಡಲು ಯೋಜಿಸಲಾಗಿದೆ.
ದಾಖಲಾತಿ ಆಂದೋಲನ: ಕಳೆದ ಕೋವಿಡ್ ಬಳಿಕ ಒಟ್ಟು ಮಕ್ಕಳ ದಾಖಲಾತಿಯಲ್ಲಿ 6 ಸಾವಿರ ಹೆಚ್ಚು ದಾಖಲಾತಿ ಕಂಡುಬಂದಿತ್ತು. ಖಾಸಗಿ ಶಾಲೆಗಳನ್ನು ತೊರೆದು ಮಕ್ಕಳು ಸರ್ಕಾರಿ ಶಾಲೆ ಮೆಟ್ಟಿಲೇರಿದ್ದರು. ಈ ಬಾರಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ವಿದ್ಯಾರ್ಥಿಗಳು ದಾಖಲಾಗುವ ನಿರೀಕ್ಷೆ ಇದೆ ಎನ್ನಲಾಗಿದೆ, ಮೇ ಅಂತ್ಯದ ಬಳಿಕ ಇಲಾಖೆಯಿಂದ ದಾಖಲಾತಿ ಆಂದೋಲನ ಆರಂಭವಾಗಲಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವುದು. ಮನೆ ಮನೆ ಸರ್ವೇ ನಡೆಸಿ ಹೊಸದಾಗಿ ಮಕ್ಕಳ ದಾಖಲಾತಿ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ.
ಕಲಿಕಾ ಚೇತರಿಕೆೆ: ಈ ಬಾರಿ ಕಲಿಕಾ ಚೇತರಿಕೆ ಎಂಬ ವಿನೂತನ ಯೋಜನೆ ಮೂಲಕ ಶಾಲೆಗಳ ಪುನರಾರಂಭವಾಗಲಿದೆ. ಕಳೆದೆರಡು ವರ್ಷ ಆನ್‌ಲೈನ್ ತರಗತಿಯಿಂದ ಸರಿಯಾದ ಭೋದನೆಯಿಂದ ವಂಚಿತರಾದ ಮಕ್ಕಳಿಗೆ ಆ್ಲೈನ್‌ನಲ್ಲಿ ಮತ್ತೆ ಹಳೆಯ ವರ್ಷದ ಕೆಲವೊಂದು ಮುಖ್ಯ ವಿಷಯಗಳನ್ನು ಭೋದಿಸುವುದು ಯೋಜನೆ ಪ್ರಮುಖ ಉದ್ದೇಶ. ಹಳೆಯ ವಿಷಯಗಳೊಂದಿಗೆ ಪ್ರಸ್ತುತ ಪಠ್ಯಪುಸ್ತಕಗಳ ವಿಷಯ ಭೋದಿಸುವುದು, ವಾರವಾರಕ್ಕೆ ಕಿರಿಪರೀಕ್ಷೆ ಮಾಡುವುದು, ಸರಿಯಾಗಿ ಕಲಿಯಲಾಗದ ವಿಷಯವನ್ನು ಪುನಃಮನನ ಮಾಡಿಸುವುದು ಕಲಿಕಾ ಚೇತರಿಕೆಯ ಪ್ರಮುಖ ಆಶಯವಾಗಿದೆ.
ಪ್ರಸಕ್ತ ವರ್ಷದ ಶಾಲೆಗಳ ಪುನರಾರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಪೂರ್ವಭಾವಿಯಾಗಿ ಎಲ್ಲ ಶಿಕ್ಷಕರ ಸಭೆ ನಡೆಯಲಿದೆ. ಶಾಲೆಗಳಲ್ಲಿ ಶ್ರಮದಾನ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮೇ 16ರಂದು ಶಾಲೆಗಳನ್ನು ಸಿಂಗರಿಸಿ ಮಕ್ಕಳಿಗೆ ಗುಲಾಬಿ ನೀಡಿ ಸ್ವಾಗತಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗಂಗಮಾರೇಗೌಡ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ