ಜಿಲ್ಲೆ

ಶೈಕ್ಷಣಿಕ ಆದಾಯ ಮಿತಿ ಹೆಚ್ಚಿಸಿ

ಚಿತ್ರದುರ್ಗ: ಎಸ್ಸಿ, ಎಸ್ಟಿ ಸಮುದಾಯದವರಿಗೆ ಶೈಕ್ಷಣಿಕ ಆದಾಯ ಮಿತಿ 2.5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು, ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಸಮೀಪ ಪ್ರತಿಭಟನೆಯೊಂದಿಗೆ ಶೈಕ್ಷಣಿಕ ಹಕ್ಕೊತ್ತಾಯ ಸಮಾವೇಶ ನಡೆಸಿ ಹಿಂದಿನ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯದವರ ಶಿಕ್ಷಣದ ಬಹುತೇಕ ಅವಕಾಶ ಕಿತ್ತುಕೊಂಡಿದ್ದು, ಸಹಿಸಲಸಾಧ್ಯ ಎಂದು ಆಕ್ರೋಶ ಹೊರಹಾಕಿದರು.

ನಮ್ಮೆಲ್ಲ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಜಾತಿ ಪ್ರಮಾಣ ಪತ್ರ ಸಲ್ಲಿಸುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ತಮಗಿಷ್ಟವಾದ ಯಾವುದೇ ಕೋರ್ಸ್‌ನಲ್ಲಿ ಪ್ರವೇಶ

ಪಡೆಯಲು ಮುಂಗಡ ಶುಲ್ಕ ಸಂದಾಯ ಮಾಡಿಸಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು. ಹೆಣ್ಣು ಮಕ್ಕಳಿಗೆ ಸಂಪೂರ್ಣ ಉಚಿತ ಪ್ರವೇಶ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಜೊತೆಗೆ 1ರಿಂದ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಬೇಕು ಎಂದು ಆಗ್ರಹಿಸಿದರು.

ಆರ್‌ಟಿಇ ಮಕ್ಕಳ ಪ್ರವೇಶಕ್ಕೆ ಹೊಸ ಮ್ಯಾಪಿಂಗ್ ಕಾಯ್ದೆ ಈ ವರ್ಷದಿಂದ ರದ್ದುಪಡಿಸಿ, 2023-24ನೇ ಶೈಕ್ಷಣಿಕ ವರ್ಷದಿಂದಲೇ ಹಳೆ ಮಾದರಿಯಲ್ಲಿ ಪ್ರವೇಶಾತಿ ಆರಂಭಿಸಬೇಕು. 2013ರಿಂದ 2018ರವರೆಗೆ ಜಾರಿಯಲ್ಲಿದ್ದ ರೀತಿಯಲ್ಲೇ ಖಾಸಗಿ ನರ್ಸಿಂಗ್ ಕಾಲೇಜುಗಳಲ್ಲಿ ಖಾಲಿ ಉಳಿಯುವ ಜಿಎನ್‌ಎಂ

ನರ್ಸಿಂಗ್, ಪ್ಯಾರಾಮೆಡಿಕಲ್, ಬಿಎಸ್ಸಿ ನರ್ಸಿಂಗ್ ತರಬೇತಿಗೆ ಪ್ರವೇಶ ಪಡೆಯುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಮತ್ತು ವಸತಿನಿಲಯ ವಿದ್ಯಾರ್ಥಿ ವೇತನವನ್ನು ಎಸ್‌ಸಿಪಿ/ಟಿಎಸ್‌ಪಿ ಅನುದಾನದ ಮೂಲಕ ಸಂದಾಯವಾಗುವಂತೆ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನವನ್ನು 1,600 ರೂ.ನಿಂದ 2,500 ರೂ.ಗೆ ಹೆಚ್ಚಿಸಬೇಕು. ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಎಸ್ಸಿ, ಎಸ್ಟಿ ಗ್ರಂಥಾಲಯ ಕಡ್ಡಾಯವಾಗಿ ಆರಂಭಿಸಬೇಕು. ಗ್ರಾಪಂಗಳಲ್ಲಿ ಶೈಕ್ಷಣಿಕ ಪುಸ್ತಕಗಳ ಖರೀದಿಗೆ ಕಡ್ಡಾಯವಾಗಿ ಅನುದಾನ ಮೀಸಲಿಡಬೇಕು ಎಂದು ಸರ್ಕಾರಕ್ಕೆ ಕೋರಿದರು.

ಮುಖಂಡರಾದ ಆರ್.ಶೇಷಣ್ಣಕುಮಾರ್, ಹುಲ್ಲೂರು ಕುಮಾರಸ್ವಾಮಿ, ತಿಪ್ಪೇಸ್ವಾಮಿ, ಹನುಮಂತಪ್ಪ, ಕರಿಯಪ್ಪ, ವಕೀಲರಾದ ಚಂದ್ರಪ್ಪ, ಬೀಸನಹಳ್ಳಿ ಜಯಪ್ಪ, ಕುಮಾರಪ್ಪ ಇತರರಿದ್ದರು.

*ಕೋಟ್
ಅಂಬೇಡ್ಕರ್ ಬರಹ ಮತ್ತು ಭಾಷಣಗಳ ಸಂಪುಟಗಳನ್ನು ಮರು ಮುದ್ರಣ ಮಾಡಬೇಕು. ವಿಶೇಷವಾಗಿ ಅವರ ‘ಬುದ್ಧ ಮತ್ತು ಆತನ ಧಮ್ಮ’ ಕೃತಿಯ 11ನೇ ಸಂಪುಟದ 1ಲಕ್ಷ ಪ್ರತಿ ಮುದ್ರಿಸಬೇಕು.
ಬಿ.ಪಿ.ತಿಪ್ಪೇಸ್ವಾಮಿ, ಪರಿಷತ್ ಅಧ್ಯಕ್ಷ