ಗೋಕಾಕ: ಶೈಕ್ಷಣಿಕ ಕ್ಷೇತ್ರದಲ್ಲಿ ಮೂಡಲಗಿ ವಲಯವು ಉತ್ತಮ ಸಾಧನೆ ಮಾಡುತ್ತಿದ್ದು, ಮುಂದಿನ
ಶೈಕ್ಷಣಿಕ ವರ್ಷದಲ್ಲಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ
ಸಾಧನೆ ಮಾಡಲು ಶಿಕ್ಷಕರು ಶ್ರಮಿಸಬೇಕು. ಶೈಕ್ಷಣಿಕ ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದು
ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿನ ಎನ್‌ಎಸ್‌ಎ್ ಅತಿಥಿ ಗೃಹದಲ್ಲಿ ಮೂಡಲಗಿ ಶೈಕ್ಷಣಿಕ ವಲಯದ 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 29 ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗಾಗಿ ಏರ್ಪಡಿಸಿದ್ದ ಸ್ಮರಣಿಕೆ ಹಾಗೂ ತಮ್ಮ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದರು.
2021-22ನೇ ಶೈಕ್ಷಣಿಕ ವರ್ಷದಲ್ಲಿ ಮೂಡಲಗಿ ವಲಯದ ಸರಕಾರಿ, ಅನುದಾನಿತ, ಅನುದಾನ ರಹಿತ ಮತ್ತು ವಸತಿ ಶಾಲೆಗಳ 29 ಪ್ರೌಢಶಾಲೆಗಳು ಶೇ.100 ಸಾಧನೆ ಮಾಡಿವೆ. 2022-23ರಲ್ಲಿ ನಡೆದಿರುವ ಪರೀಕ್ಷೆಯ ಸಾಧನೆಗಳಲ್ಲಿಯೂ ಇನ್ನೂ ಸ್ಮರಣಿಕೆ ಬರಬೇಕಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಸಾಧನೆಗೈದಿರುವ ಶಾಲೆಗಳನ್ನು ಗುರುತಿಸಿ ಸ್ಮರಣಿಕೆ ನೀಡುತ್ತ ಬರುತ್ತಿದ್ದಾರೆ ಎಂದು ತಿಳಿಸಿದರು.
ಮೂಡಲಗಿ ವಲಯದ ಶಿಕ್ಷಕರ ಪ್ರಯತ್ನದಿಂದ ಪ್ರತಿ ವರ್ಷವೂ ವಿದ್ಯಾರ್ಥಿಗಳು ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿ ವಲಯಕ್ಕೆ ಉತ್ತಮ ಹೆಸರು ತರುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ಹಿಂದೆ ಮಾಡಿದ ಸಾಧನೆಯನ್ನು ಮುಂದಿನ ವರ್ಷದಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಪುನರಾವರ್ತಿಸಿ ಶಾಲೆಗೆ ಮತ್ತು ವಲಯಕ್ಕೆ ಕೀರ್ತಿ ತರುವ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 29 ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸ್ಮರಣಿಕೆ ಹಾಗೂ ಅಭಿನಂದನಾ ಪತ್ರಗಳನ್ನು ವಿತರಿಸಿದರು. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸತ್ಕರಿಸಿದರು. ಮೂಡಲಗಿ ವಲಯದ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಮಧ್ಯಾಹ್ನ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಎ.ಡಿ.ಮಲಬನ್ನವರ, ಸತೀಶ ಬಿ.ಎಸ್., ವಲಯದ ಬಿಆರ್‌ಪಿ, ಸಿಆರ್‌ಪಿ, ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಇದ್ದರು.