ಜಿಲ್ಲೆ

ಶೈಕ್ಷಣಿಕ ಅಭಿವೃದ್ಧಿಗೆ ಪ್ರಮುಖ ಆದ್ಯತೆ

ಜಯತೀರ್ಥ ಪಾಟೀಲ

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಪ್ರಗತಿಗೆ ಪ್ರಮುಖ ಆದ್ಯತೆ ನೀಡಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಸಾಕ್ಷರತಾ ಪ್ರಮಾಣ ಕಡಿಮೆ ಇದೆ. ಫಲಿತಾಂಶದಲ್ಲೂ ಹಿಂದಿದೆ. ವಿಶೇಷವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರತಿ ವರ್ಷ ಕೊನೆ ಸ್ಥಾನದಲ್ಲಿ ಉಳಿಯುತ್ತಿದ್ದೇವೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಅಗತ್ಯವಿದೆ. ಶಿಕ್ಷಕರು, ಶಾಲಾ ಕೋಣೆಗಳ ಕೊರತೆ, ಇರುವ ಕೋಣೆಗಳು ಶಿಥಿಲಗೊಂಡು ಮಕ್ಕಳು ತೊಂದರೆಗೆ ಒಳಗಾಗಿದ್ದಾರೆ. ಹೀಗಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತಿದ್ದು, ಈ ಶಿಕ್ಷಕರಿಗೆ ವೇತನವನ್ನು ಮಂಡಳಿಯಿಂದ ನೀಡಲು ಚಿಂತನೆ ನಡೆದಿದೆ ಎಂದರು.
ಜೇವರ್ಗಿ ತಾಲೂಕಿನಲ್ಲಿ ಅಕ್ಷರ ಆವಿಷ್ಕಾರ ಮಿಷನ್-೧೦೦ ಅನುಷ್ಠಾನದ ಮೂಲಕ ಜಿಲ್ಲೆಗೆ ೪ನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಬಂದು ತಲುಪಿದೆ. ಹೀಗಾಗಿ ಈ ಮಾದರಿ ಇತರೆಡೆ ಅಳವಡಿಸಿ, ಶೈಕ್ಷಣಿಕ ಸುಧಾರಣೆಗೆ ಒತ್ತು ನೀಡಲಾಗುವುದು. ರಾಜ್ಯ ಸರ್ಕಾರ ಮಂಡಳಿಗೆ ಅಗತ್ಯ ಅನುದಾನ ನೀಡಲಿದೆ. ಆದರೆ ಸಿಬ್ಬಂದಿ ಕೊರತೆ ಇದೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ೨೨೫ ಇಂಜಿನಿಯರ್‌ಗಳನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಿದರೆ, ಕೇವಲ ೨೦ ಜನರನ್ನು ಒದಗಿಸಿತ್ತು. ಪ್ರಸಕ್ತ ಮಂಡಳಿಯಲ್ಲಿ ಒಟ್ಟು ೬೩ ಜನ ಕೆಲಸ ಮಾಡುತ್ತಿದ್ದು, ಪ್ರತಿ ಮತಕ್ಷೇತ್ರಕ್ಕೆ ನಾಲ್ಕು ಜನ ಇಂಜಿನಿಯರ್ ಸೇರಿ ಒಟ್ಟು ೧೬೦ ಹುದ್ದೆ ಭರ್ತಿ ಮಾಡಬೇಕಿದೆ. ಶಾಸಕರು ತಮ್ಮ ಕ್ಷೇತ್ರದ ಕ್ರಿಯಾಯೋಜನೆಯನ್ನು ಡಿ.೩೧ರೊಳಗೆ ಸಲ್ಲಿಸಬೇಕು ಎಂದು ಹೇಳಿದರು.
ಕಲಬುರಗಿಯಲ್ಲಿ ನಿರ್ಮಾಣ ಹಂತದಲ್ಲಿರುವ ಜಯದೇವ ಆಸ್ಪತ್ರೆಗೆ ಕೆಕೆಆರ್‌ಡಿಬಿ ೧೮೨ ಕೋಟಿ ರೂ. ಅನುದಾನ ಒದಗಿಸಿದೆ. ಜತೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಾಡಲಾಗುತ್ತಿದೆ. ಜೇವರ್ಗಿಯಲ್ಲಿ ೧೦೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರ ಶೇ.೬೦ ಮತ್ತು ರಾಜ್ಯ ಸರ್ಕಾರ ಶೇ.೪೦ ಅನುದಾನ ಒದಗಿಸಿದೆ ಎಂದು ತಿಳಿಸಿದರು.