ರಾಣೆಬೆನ್ನೂರ: ಬಡವರ ಬಾದಾಮಿ ಎಂದೇ ಗುರುತಿಸಲಾಗುವ ಶೇಂಗಾ ಬೆಳೆದ ಕೃಷಿಕರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಸತತ ಮಳೆಯಿಂದಾಗಿ ಶೇಂಗಾ ಫಸಲು ಹಾಳಾಗುತ್ತಿದ್ದು, ಅತ್ತ ಮಾರಾಟ ಮಾಡಲಾಗದೆ, ಇತ್ತ ಜಮೀನಿನಲ್ಲೂ ಇಟ್ಟುಕೊಳ್ಳಲಾಗದೆ ಗೋಳಾಡುವಂತಾಗಿದೆ. ಇದೇ ವೇಳೆ ಬೆಲೆ ಕುಸಿತದ ಹೊಡೆತವೂ ಬಿದ್ದಿದೆ.
ರಾಣೆಬೆನ್ನೂರ ತಾಲೂಕಿನ 1504 ಹೆಕ್ಟೇರ್ ಪ್ರದೇಶ ಸೇರಿ ಜಿಲ್ಲೆಯಲ್ಲಿ 19,840 ಹೆಕ್ಟೇರ್ ಪ್ರದೇಶದಲ್ಲಿ ರೈತರು ಶೇಂಗಾ ಬಿತ್ತನೆ ಮಾಡಿದ್ದಾರೆ. ಆರಂಭದಲ್ಲಿ ಮಳೆ ಉತ್ತಮವಾಗಿದ್ದರಿಂದ ಬೆಳೆ ಕೂಡ ಉತ್ತಮವಾಗಿ ಬಂದಿದೆ. ರೈತರು ಈಗ ಶೇಂಗಾ ಬೆಳೆಯನ್ನು ಕಿತ್ತು ಜಮೀನಿನಲ್ಲಿ ಒಣಹಾಕಿದ್ದಾರೆ. ಆದರೆ, ನಿತ್ಯ ಸಂಜೆ ಹಾಗೂ ರಾತ್ರಿ ಸಮಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸವಣೂರ, ರಾಣೆಬೆನ್ನೂರ, ಶಿಗ್ಗಾಂವಿ, ಹಾವೇರಿ ಭಾಗದಲ್ಲಿ ಸಂಪೂರ್ಣ ಶೇಂಗಾ ಬೆಳೆ ನೀರಿನಲ್ಲಿ ಮುಳುಗಿ ಮೊಳಕೆಯೊಡುವ ಹಂತಕ್ಕೆ ತಲುಪಿದೆ. ಹೀಗಾಗಿ, ರೈತರು ಮಳೆಯಿಂದ ತೊಯ್ದ ಬೆಳೆಯನ್ನು ಸಂರಕ್ಷಿಸಿಕೊಳ್ಳಲಾಗದೆ ಗೋಳಾಡುತ್ತಿದ್ದಾರೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದೆ 1 ಕ್ವಿಂಟಾಲ್ ಶೇಂಗಾಗೆ 5 ಸಾವಿರ ರೂ.ಗೂ ಬೆಲೆ ಇತ್ತು. ಇದೀಗ 1800 ರಿಂದ 4000 ರೂ.ವರೆಗೆ ಕುಸಿತ ಕಂಡಿದೆ. ಸಂಪೂರ್ಣ ಒಣಗಿದ ಶೇಂಗಾಕ್ಕೆ ಮಾತ್ರ 4 ಸಾವಿರ ರೂ.ವರೆಗೆ ಬೆಲೆ ದೊರೆಯುತ್ತಿದೆ. ಆದರೆ, ಶೇಂಗಾ ಒಣಗಿಸಲು ಮಳೆ ಬಿಡುವು ನೀಡುತ್ತಲೇ ಇಲ್ಲ. ಒಂದು ಎಕರೆಗೆ ಶೇಂಗಾ ಬೆಳೆಯಲು 50 ಕೆ.ಜಿ. ಬೀಜ, ಔಷಧ, ಗೊಬ್ಬರ ಹಾಗೂ ಕೂಲಿ ಕಾರ್ವಿುಕರ ಸಂಬಳ ಸೇರಿ 22 ಸಾವಿರದಿಂದ 24 ಸಾವಿರ ರೂಪಾಯಿವರೆಗೆ ಖರ್ಚು ಬರುತ್ತದೆ. ಉತ್ತಮ ಇಳುವರಿ ಬಂದಿದೆ ಎಂದರೂ ಎಕರೆಗೆ 25ರಿಂದ 30 ಚೀಲದಷ್ಟು ಶೇಂಗಾ ಬರುತ್ತದೆ. ಒಂದು ಚೀಲ 30 ಕೆ.ಜಿ. ತೂಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿರುವ ಬೆಲೆಗೆ ಶೇಂಗಾ ಮಾರಾಟ ಮಾಡಿದರೆ, ಬಿತ್ತನೆಗೆ ಮಾಡಿದ ಖರ್ಚೂ ಹುಟ್ಟುವುದಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಶೇಂಗಾ ಬೆಳೆಗೆ ಕನಿಷ್ಠ 6 ಸಾವಿರ ರೂ. ಬೆಂಬಲ ಬೆಲೆ ಘೊಷಿಸಬೇಕು. ಲಾಕ್ಡೌನ್ನಲ್ಲಿ ಮೆಕ್ಕೆಜೋಳ ಬೆಳೆಗಾರರಿಗೆ ನೀಡಿದ ಪರಿಹಾರದಂತೆ ಮಳೆಯಿಂದ ಹಾನಿಯಾದ ಶೇಂಗಾ ಬೆಳೆಗಾರರಿಗೂ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ ಶೇಂಗಾ ಬೆಳೆಗಾರರು ಆರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ. | ರವೀಂದ್ರಗೌಡ ಪಾಟೀಲ, ರೈತ ಮುಖಂಡ ಮಾರುಕಟ್ಟೆಗೆ ಹಸಿ ಶೇಂಗಾ ಹೆಚ್ಚಾಗಿ ಬರುತ್ತಿರುವ ಕಾರಣ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಒಣಗಿದ ಹಾಗೂ ಗುಣಮಟ್ಟದ ಶೇಂಗಾಗೆ 4 ಸಾವಿರ ರೂ.ವರೆಗೂ ಬೆಲೆಯಿದೆ. | ಪರಮೇಶ ನಾಯ್ಕ, ಎಪಿಎಂಸಿ ಸಹ ಕಾರ್ಯದರ್ಶಿ ರಾಣೆಬೆನ್ನೂರ