ಚಿಕ್ಕಮಗಳೂರು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಮನವಿ ಸಲ್ಲಿಸಿದ ಕರವೇ ಕಾರ್ಯಕರ್ತರು ಶೇ. ೬೦ರಷ್ಟು ಕನ್ನಡವಿರುವ ನಾಮಫಲಕಗಳನ್ನು ಅಂಗಡಿ ಮುಂಗಟ್ಟುಗಳಲ್ಲಿ ಅಳವಡಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಗ್ನಿ ಸುಮಂತ್, ಮಧು, ಮಂಜುನಾಥ್, ಜೀವನ್, ತ್ಯಾಗರಾಜ್, ಸುನೀಲ್ ಮತ್ತಿತರರಿದ್ದರು. 
ಜಿಲ್ಲೆ

ಶೇ. ೬೦ರಷ್ಟು ಕನ್ನಡವಿರುವ ನಾಮಫಲಕ ಅಳವಡಿಸಲು ಮನವಿ

ಚಿಕ್ಕಮಗಳೂರು: ನಗರದಲ್ಲಿ ಶೇ. ೬೦ರಷ್ಟು ಕನ್ನಡವಿರುವ ನಾಮಫಲಕವನ್ನು ಹಾಕದೆ ಕಾನೂನು ಉಲ್ಲಂಘಿಸಲಾಗಿದೆ. ಕೂಡಲೇ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಜಿಲ್ಲೆ ಹಾಗೂ ನಗರ ಸೇರಿದಂತೆ ಕನ್ನಡದಲ್ಲಿ ನಾಮಫಲಕವನ್ನು ಶೇ. ೬೦ರಷ್ಟು ಮತ್ತು ಅನ್ಯ ಭಾಷೆಯಲ್ಲಿ ಶೇ.೪೦ರಷ್ಟು ಇಲ್ಲದಿರುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಶೇ. ೬೦ರಷ್ಟು ಕನ್ನಡವಿರುವ ನಾಮಫಲಕ ಹಾಕಬೇಕೆಂದು ಸರ್ಕಾರದ ಆದೇಶವಿದ್ದರೂ ಆದೇಶವನ್ನು ಗಾಳಿಗೆ ತೂರಿ ಆಂಗ್ಲಭಾಷೆ ಹಾಗೂ ಅನ್ಯ ಭಾಷೆಗೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.

ಇನ್ನು ೧೫ ದಿನಗಳೊಳಗಾಗಿ ಶೇ.೬೦ ರಷ್ಟು ಕನ್ನಡದ ನಾಮಫಲಕಗಳನ್ನು ಹಾಕುವಂತೆ ವಾಣಿಜ್ಯೋದ್ಯಮಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲವಾದರೆ ವ್ಯಾಪಾರಸ್ಥರ ಪರವಾನಗಿಯನ್ನು ರದ್ದುಪಡಿಸುವಂತೆ ಮನವಿ ಮಾಡಿದರು.

ಇದು ಅತೀ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರದಿದ್ದರೆ ನಮ್ಮ ಕರವೇ ವತಿಯಿಂದ ಆಂಗ್ಲ ಭಾಷೆಯ ನಾಮಫಲಕಗಳಿಗೆ ಕಪ್ಪು ಬಣ್ಣ ಬಳಿಯುವ ಮೂಲಕ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಅಗ್ನಿ ಸುಮಂತ್, ಗೌರವಾಧ್ಯಕ್ಷ ಮಧು, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಜೀವನ್, ನಗರ ಉಪಾಧ್ಯಕ್ಷ ತ್ಯಾಗರಾಜ್, ಆಟೋ ಘಟಕದ ಜಿಲ್ಲಾಧ್ಯಕ್ಷ ಸುನಿಲ್ ಮತ್ತಿತರರಿದ್ದರು.