ಜಿಲ್ಲೆ

ಶೇ.99 ಇಲೆಕ್ಟ್ರಿಕ್‌ ಇಂಜಿನ್‌ಗಳ ಓಡಾಟ

ವಿಜಯವಾಣಿ ಸುದ್ದಿಜಾಲ ಕಾರವಾರ
ಸಂಪೂರ್ಣವಾಗಿ ವಿದ್ಯುದೀಕರಣಗೊಂಡ ಕೊಂಕಣ ರೈಲ್ವೆ ಮಾರ್ಗದಲ್ಲಿ ಏಳು ತಿಂಗಳ ಬಳಿಕ ಶೇ.99 ರೈಲು ಗಾಡಿಗಳು ಇಲೆಕ್ಟ್ರಿಕ್‌ ಲೋಕೋಮೊಟಿವ್ ಮೂಲಕ ಸಂಚಾರ ಪ್ರಾರಂಭಿಸಲಿವೆ. ಇನ್ನೆರಡು ದಿನದಲ್ಲಿ ಬೆಂಗಳೂರು-ಕಾರವಾರ ಹೊರತುಪಡಿಸಿ ಉಳಿದೆಲ್ಲ ರೈಲುಗಳೂ ವಿದ್ಯುತ್ ಚಾಲಿತವಾದಂತಾಗಿದೆ.
ಈ ಮಾರ್ಗದಲ್ಲಿ ನಿತ್ಯ ಓಡಾಡುವ 50 ರಿಂದ 60 ರೈಲುಗಳಲ್ಲಿ ಎಲ್ಲ ಗೂಡ್ಸ್ ಗಾಡಿಗಳು ಇಲೆಕ್ಟ್ರಿಕ್‌ ಇಂಜಿನ್‌ನಲ್ಲಿ ಓಡುತ್ತಿವೆ. ಹೆಚ್ಚಿನ ಪ್ರಯಾಣಿಕರ ರೈಲುಗಳೂ ವಿದ್ಯುತ್ ಚಾಲಿತವಾಗಿದ್ದು, ಫೆ. 12 ರಿಂದ ಬಾಕಿ ಉಳಿದ 12 ದೂರಗಾಮಿ ರೈಲುಗಳೂ ಇಲೆಕ್ಟ್ರಿಕ್‌ ಲೋಕೋಮೊಟಿವ್ ಮೂಲಕವೇ ಸಂಚಾರ ಪ್ರಾರಂಭಿಸಲಿವೆ ಎಂದು ಕೊಂಕಣ ರೈಲ್ವೆ ನಿಗಮದ ಪ್ರಾದೇಶಿಕ ಪ್ರಬಂಧಕ (ಆರ್‌ಆರ್‌ಎಂ) ಬಿ.ಬಿ.ನಿಕ್ಕಂ ವಿಜಯವಾಣಿಗೆ ತಿಳಿಸಿದ್ದಾರೆ.
1287 ಕೋಟಿ ರೂ. ವೆಚ್ಚದಲ್ಲಿ 741 ಕಿಮೀ ಕೊಂಕಣ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿ ಕಳೆದ ಮಾರ್ಚ್ ತಿಂಗಳಲ್ಲೇ ಪೂರ್ಣಗೊಂಡಿತ್ತು. ವಿದ್ಯುದೀಕೃತ ಕಾಮಗಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 19 ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಿದ್ದರು. ಆದರೆ, ವಿದ್ಯುತ್ ಚಾಲಿತ ಇಂಜಿನ್‌ಗಳ ಕೊರತೆ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ಇದುವರೆಗೂ ಕೆಲವು ಡೀಸೆಲ್ ಇಂಜಿನ್ ಚಾಲಿತ ರೈಲುಗಳೇ ಮುಂದುವರಿದಿದ್ದವು. ಹಂತ, ಹಂತವಾಗಿ ಇಲೆಕ್ಟ್ರಿಕ್‌ ಲೋಕೋಗೆ ಪರಿವರ್ತನೆ ನಡೆದಿದ್ದು, ಮೊದಲು ಮಂಗಳೂರು-ಕಾರವಾರ ನಡುವೆ ಕೆಲವು ರೈಲು ಗಾಡಿಗಳನ್ನು ಲೋಕೋ ಇಂಜಿನ್ ಬಳಸಿ ಓಡಿಸಲಾಯಿತು.
ಡೀಸೆಲ್ ಇಂಜಿನ್‌ನಲ್ಲಿ ಓಡುವ ಘಟ್ಟದ ರೈಲುಗಳು:
ಕೇರಳದಿಂದ ಮುಂಬೈವರೆಗಿನ ಸಂಪೂರ್ಣ ಮಾರ್ಗ ವಿದ್ಯುದೀಕರಣವಾಗಿದೆ. ಆದರೆ, ಮಂಗಳೂರು-ಬೆAಗಳೂರು ಹಾಗೂ ಮಡಗಾಂವ-ತೀನೈಘಾಟ್ ಮಾರ್ಗ ವಿದ್ಯುದೀಕರಣ ಪೂರ್ಣಗೊಂಡಿಲ್ಲ ಇದರಿಂದ ಕಾರವಾರ-ಬೆಂಗಳೂರು ನಡುವೆ ಓಡಾಡುವ ಐದು ರೈಲುಗಳಿಗೆ ಇದುವರೆಗೂ ಡೀಸೆಲ್ ಇಂಜಿನ್ ಬಳಸಲಾಗುತ್ತಿದೆ. ಆ ಎರಡು ಮಾರ್ಗಗಳ ವಿದ್ಯುದೀಕರಣ ಪೂರ್ಣವಾಗುವವರೆಗೆ ಡೀಸೆಲ್ ಇಂಜಿನ್ ಬಳಕೆ ಅನಿವಾರ್ಯ ಎನ್ನುತ್ತಾರೆ ಕೊಂಕಣ ರೈಲ್ವೆ ಅಧಿಕಾರಿಗಳು.


ಇಲೆಕ್ಟ್ರಿಕ್‌ ಲೋಕೋಗೆ ಬದಲಾವಣೆ
ಇದುವರೆಗೆ ಡೀಸೆಲ್ ಇಂಜಿನ್‌ನಲ್ಲಿ ಓಡಾಡುತ್ತಿದ್ದ 12 ರೈಲುಗಳಿಗೆ ಫೆ.12 ರಿಂದ ಇಲೆಕ್ಟ್ರಿಕ್‌ ಲೋಕೋಮೊಟಿವ್ ಅಳವಡಿಸಲಾಗುತ್ತಿದೆ. 12223/12224 ಲೋಕಮಾನ್ಯ ತಿಲಕ್-ಎರ್ನಾಕುಲಂ-ಲೋಕಮಾನ್ಯತಿಲಕ್ ಎಕ್ಸ್ಪ್ರೆಸ್, 22150/22149-ಪುಣೆ-ಎರ್ನಾಕುಲಂ ಜಂಕ್ಷನ್- ಪುಣೆ ಎಕ್ಸ್ಪ್ರೆಸ್, 12133/12134 ಮುಂಬೈ-ಮAಗಳೂರು-ಮುಂಬೈ ಎಕ್ಸ್ಪ್ರೆಸ್, 50107/50108 ಸಾವಂತವಾಡಿ ರೋಡ್-ಮಡಗಾಂವ-ಸಾವಂತವಾಡಿ ರೋಡ್, 11099 /11100 ಮಡಗಾಂವ-ಮುಂಬೈ-ಮಡಗಾಂವ, 10106/10105 ದೀವಾ-ಸಾವಂತವಾಡಿ ರೋಡ್-ದೀವಾ ರೈಲುಗಳು ವಿದ್ಯುತ್ ಚಾಲಿತವಾಗಲಿವೆ.



ಪನ್ವೇಲ್‌ನಿಂದ ಸಂಚಾರ
ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ಸ್ನಲ್ಲಿ ಕಾಮಗಾರಿಗಳು ನಡೆದಿರುವುದರಿಂದ ಫೆ.13 ರಿಂದ ಮಾರ್ಚ್ 19 ರವರೆಗೆ ಮತ್ಸ್ಯಗಂಧ ಹಾಗೂ ನೇತ್ರಾವತಿ ಎಕ್ಸ್ಪ್ರೆಸ್ ರೈಲುಗಳು ಪನ್ವೇಲ್ ನಿಲ್ದಾಣದಿಂದ ಓಡಾಡಲಿವೆ ಎಂದು ಕೊಂಕಣ ರೈಲ್ವೆ ನಿಗಮದ ಪ್ರಕಟಣೆ ತಿಳಿಸಿದೆ.



ಇಲೆಕ್ಟ್ರಿಕ್‌ ಲೋಕೋಮೊಟಿವ್ ಬಳಕೆಯಿಂದ ಕೊಂಕಣ ರೈಲ್ವೆ ನಿಗಮಕ್ಕೆ ನೂರಾರು ಕೋಟಿ ರೂ. ಉಳಿತಾಯವಾಗಲಿದೆ. ಮಾಲಿನ್ಯವೂ ಕಡಿಮೆಯಾಗಲಿದೆ. ಎಷ್ಟು ಉಳಿತಾಯವಾಗಲಿದೆ ಎಂಬ ಬಗ್ಗೆ ಮಾರ್ಚ್ ನಂತರ ಮಾಹಿತಿ ಸಿಗಲಿದೆ.
ಬಿ.ಬಿ.ನಿಕ್ಕಂ
ಕೊಂಕಣ ರೈಲ್ವೆ ಕಾರವಾರ ಆರ್‌ಆರ್‌ಎಂ