ಜಿಲ್ಲೆ

ಶೇ. 50 ಹಾಸಿಗೆ ಕೋವಿಡ್​ಗೆ ಮೀಸಲು

ಧಾರವಾಡ: ಕೋವಿಡ್ 19 ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಸರ್ಕಾರಿ ಆಸ್ಪತ್ರೆಗಳು ಹಾಗೂ ಕಿಮ್್ಸ ಜೊತೆಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳೂ ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಸಾಮರ್ಥ್ಯದ ಶೇ. 50ರಷ್ಟು ಕೋವಿಡ್ ಚಿಕಿತ್ಸೆಗೆ ಮೀಸಲಿಡಲು ಒಪ್ಪಿಗೆ ನೀಡಿವೆ. ಜಿಲ್ಲಾಡಳಿತ ಅಂಥ ಆಸ್ಪತ್ರೆಗಳಿಗೆ ಅಗತ್ಯ ಸಹಕಾರ ನೀಡಲಿದೆ. ಇಂದಿನಿಂದಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಪ್ರಾರಂಭವಾಗಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕರೊನಾ ನಿಯಂತ್ರಣ ಕಾರ್ಯವನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ಈ ಸಾಂಕ್ರಾಮಿಕ ವೈರಾಣುವನ್ನು ತಡೆಯಲು ಖಾಸಗಿ ಆಸ್ಪತ್ರೆಗಳ ಸಹಕಾರ ಕೂಡ ಮುಖ್ಯ. ಅವಳಿನಗರದಲ್ಲಿ 18 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಎಲ್ಲ ಆಸ್ಪತ್ರೆಗಳು ತಮ್ಮಲ್ಲಿರುವ ಒಟ್ಟು ಹಾಸಿಗೆಗಳು, ಐಸಿಯು ಹಾಗೂ ವೆಂಟಿಲೇಟರ್​ಗಳ ಮಾಹಿತಿ ಒದಗಿಸಿವೆ. ಇವುಗಳಲ್ಲಿ ಶೇ. 50ರಷ್ಟನ್ನು ಕೋವಿಡ್ ಚಿಕಿತ್ಸೆಗೆ ಒದಗಿಸಬೇಕು. ರೋಗ ಲಕ್ಷಣ ಇರುವವರನ್ನು ಮತ್ತು ಸಾಮಾನ್ಯ ಜ್ವರ ಇರುವವರನ್ನು ಈ ಆಸ್ಪತ್ರೆಗಳಿಗೆ ದಾಖಲಿಸಲಾಗುವುದು. ಸಾರ್ವ ಜನಿಕ ವಲಯದ ಆಸ್ಪತ್ರೆಯಿಂದ ಶಿಫಾರಸುಗೊಂಡು ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ಬಂದರೆ ಅವರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಬೇಕು. ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ದಾಖಲಾದರೆ ಅದರ ವೆಚ್ಚವನ್ನು ರೋಗಿಗಳೇ ಭರಿಸುತ್ತಾರೆ. ಕೋವಿಡ್ ರೋಗಿಗಳ ಚಿಕಿತ್ಸೆ ಮತ್ತು ಆಕಸ್ಮಿಕವಾಗಿ ಕೋವಿಡ್​ನಿಂದ ಮೃತಪಡುವ ವ್ಯಕ್ತಿಗಳ ಪಾರ್ಥಿವ ಶರೀರದ ನಿರ್ವಹಣೆ ಕುರಿತು ಮಾರ್ಗದರ್ಶನ ಅಗತ್ಯವಿರುವ ಆಸ್ಪತ್ರೆಗಳು ತಮ್ಮ ವೈದ್ಯರು ಮತ್ತು ಸಿಬ್ಬಂದಿಯನ್ನು ಕಿಮ್ಸ್​ಗೆ ನಿಯೋಜಿಸಿ ಒಂದು ದಿನ ತರಬೇತಿ ಪಡೆಯಬಹುದು. ಕಿಮ್್ಸ ವೈದ್ಯರು ಮತ್ತು ಸಿಬ್ಬಂದಿಯ ತಂಡ ಮಾರ್ಗದರ್ಶನ ನೀಡಲಿದೆ ಎಂದರು.

ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ್ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದಂತೆ ಚಿಕಿತ್ಸೆ ನೀಡಿ ನಿಯಮಾನುಸಾರ ಸಹಕರಿಸಬೇಕು. ರೋಗಲಕ್ಷಣಗಳನ್ನು ಆಧರಿಸಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​ಗಳಿಗೆ ಕಳುಹಿಸಿಕೊಡಲಾಗುವುದು. ಕರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದರು.

ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಇತರರು ಇದ್ದರು.