ಜಿಲ್ಲೆ

ಶೇ.5 ರಷ್ಟು ಮೀಸಲಾತಿ ಪಾಲಿಸಿ

ಚಾಮರಾಜನಗರ: ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016 ಜಾರಿಗೆ ಬಂದ ನಂತರ ಸುಮಾರು 21 ಅಂಗ ವೈಕ್ಯಲ್ಯತೆಗಳನ್ನು ಇದರ ಅಡಿಯಲ್ಲಿ ಪರಿಗಣಿಸಲಾಗಿದೆ. ಅದರಂತೆ ಸರ್ಕಾರವು ಅಂಗವಿಕಲರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಸೂಕ್ತ ರೀತಿಯಲ್ಲಿ ಸವಲತ್ತುಗಳನ್ನು ತಲುಪಿಸಲು ಮುಂದಾಗಬೇಕು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.5 ರಷ್ಟು ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆಯಕ್ತ ದಾಸ್ ಸೂರ್ಯವಂಶಿ ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಅನುಷ್ಠಾನ ಮತ್ತು ವಿಕಲಚೇತನರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಅಂಗವಿಕಲರಿಗೆ ಸಂಬಂಧಿಸಿದ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಆದಷ್ಟು ಬೇಗ ಮುಕ್ತಾಯಗೊಳಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ವಿವಿಧ ಇಲಾಖೆಗಳು ಮತ್ತು ನಿಗಮ ಮಂಡಳಿಗಳಲ್ಲಿ ಬರುವ ಯೋಜನೆಗಳಲ್ಲಿ ಶೇ.5 ರಷ್ಟು ಅನುದಾನವನ್ನು ಅಂಗವಿಕರು ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

3000 ಯುಡಿಐಡಿ ಕಾರ್ಡ್ ಬಾಕಿ:

ಜಿಲ್ಲೆಯಲ್ಲಿ 688 ಮಕ್ಕಳನ್ನು ಸ್ಕ್ರೀನ್ ಮಾಡಲಾಗಿದ್ದು, 156 ಅಂಗವಿಕಲ ಮಕ್ಕಳನ್ನು ಗುರಿತಿಸಲಾಗಿದೆ. ಸುಮಾರು 60 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, 50 ಮಕ್ಕಳಿಗೆ ಚಿಕಿತ್ಸೆ ನೀಡಬೇಕಿದೆ. 17,222 ಯುಡಿಐಡಿ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದ್ದು, 3000 ಯುಡಿಐಡಿ ಕಾರ್ಡ್‌ಗಳನ್ನು ವಿತರಣೆ ಮಾಡುವುದು ಬಾಕಿಯಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 144 ಅಂಗನವಾಡಿ ಕೇಂದ್ರಗಳಿದ್ದು 110 ಅಂಗವಿಕಲ ಮಕ್ಕಳಿದ್ದಾರೆ. ಇದರಲ್ಲಿ ಬುದ್ಧಿಮಾಂದ್ಯ, ಕಿವಿ ಕೇಳದ ಮತ್ತು ಮಾತಿಬಾರದ ಮಕ್ಕಳು ಹೆಚ್ಚಾಗಿದ್ದಾರೆ. ಅಂಗವಿಕಲರಿಗೆ ಇಲಾಖೆಯಿಂದ ದೊರೆಯುವ ಯೋಜನೆಗಳಲ್ಲಿ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದರು.

ಉದ್ಯೋಗಕ್ಕೆ ಸೂಕ್ತ ತರಬೇತಿ:

ಜಿಲ್ಲಾ ಉದ್ಯೋಗ ಅಧಿಕಾರಿ ಅಕ್ಬರ್ ಮಾತನಾಡಿ, ಜಿಲ್ಲೆಯ ಉದ್ಯೋಗ ವಿನಿಮಯ ಕಚೇರಿಯಲ್ಲಿ 149 ಅಂಗವಿಕಲರು ನೋಂದಣಿಯಾಗಿದ್ದು, ಅವರಿಗೆ ಪ್ರತ್ಯೇಕವಾಗಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಆದರೇ ಕೆಲವರಿಗೆ ಬೆಂಗಳೂರಿನಲ್ಲಿ ಉದ್ಯೋಗದ ತರಬೇತಿ ಇದ್ದ ಕಾರಣದಿಂದ ಹೆಚ್ಚಿನ ಜನರು ಹೋಗಲಿಲ್ಲ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಇಲಾಖೆ ವತಿಯಿಂದ ಉದ್ಯೋಗ ತರಬೇತಿಯನ್ನು ಇಲ್ಲೇ ಹಮ್ಮಿಕೊಳ್ಳಲಾಗುವುದು ಎಂದರು. ಈ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ ಮುಂದಿನ ದಿನಗಳಲ್ಲಿ ಮೆಗಾ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುತ್ತಿದ್ದು, ಅಲ್ಲಿ ಅಂಗವಿಕಲರಿಗೆ ಸೂಕ್ತ ಅವಕಾಶ ಕಲ್ಪಿಸಲಾಗುವುದು ಎಂದರು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಂಗವಿಕಲರಿಗೆ ಸೂಕ್ತ ಅವಕಾಶಗಳನ್ನು ಮಾಡಿಕೊಟ್ಟರೇ ಅವರ ಅಭಿವೃದ್ಧಿ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಎಸ್ಸಿಪಿ/ಟಿಎಸ್ಪಿ ಅನುದಾನ ಬಳಕೆ ಮಾದರಿಯಲ್ಲಿ ಅಂಗವಿಕಲರ ಅನುದಾನವನ್ನು ನಿಗದಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅದನ್ನು ಜಾರಿಗೊಳಿಸಲಿದೆ ಎಂಬ ವಿಶ್ವಾಸವಿದೆ.

-ದಾಸ್ ಸೂರ್ಯವಂಶಿ, ಆಯುಕ್ತ, ಅಂಗವಿಕಲ ಹಕ್ಕುಗಳ ಅಧಿನಿಯಮ