ಜಿಲ್ಲೆ

ಶೇ. 40ರಷ್ಟು ಕಮಿಷನ್ ಆರೋಪ ಮಾಡುವವರು ಹುಚ್ಚರು

ಗದಗ: ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮೋತ್ಸವ, ಡಿ.ಕೆ. ಶಿವಕುಮಾರೋತ್ಸವ, ಜಿ. ಪರಮೇಶ್ವರೋತ್ಸವ, ಜಮೀರೋತ್ಸವ ಎಂಬ ವ್ಯಕ್ತಿಗತವಾಗಿ ಉತ್ಸವ ಮಾಡುತ್ತಿದ್ದಾರೆ. ಆದರೆ, ಜನರಿಗಾಗಿ ಬಿಜೆಪಿ ಆಯೋಜಿಸಿದ್ದ ಜನ ಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿರುವುದಕ್ಕೆ ಕಾರ್ಯಕ್ರಮವೇ ಸಾಕ್ಷಿ ಎಂದರು.

ರಾಜ್ಯ ಸರ್ಕಾರದ ಮೇಲೆ ಶೇ. 40ರಷ್ಟು ಕಮಿಷನ್ ಆರೋಪ ಮಾಡುತ್ತಿರುವವರು ಹುಚ್ಚರು. ಯಾವುದೇ ದಾಖಲೆ ಇಲ್ಲದೇ ಆರೋಪ ಮಾಡಿದ್ದಾರೆ. ದಾಖಲೆಗಳಿದ್ದರೆ ಕೊಡಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಅವಧಿಯಲ್ಲಿ ಶೇ 100ರಷ್ಟು ಭ್ರಷ್ಟಾಚಾರ ಇತ್ತು. ದಿಂಬು, ಹಾಸಿಗೆಯಲ್ಲೂ ಕಮಿಷನ್ ಬಿಟ್ಟಿಲ್ಲ. ಕಾಂಗ್ರೆಸ್ ಅವಧಿಯಲ್ಲಿನ ಭ್ರಷ್ಟಾಚಾರ ಮುಚ್ಚಿ ಹಾಕಲು ಎಸಿಬಿ ರಚಿಸಲಾಯಿತು. ಭ್ರಷ್ಟಾಚಾರ ಮುಚ್ಚಿಕೊಳ್ಳಲು ಲೋಕಾಯುಕ್ತ ಅಧಿಕಾರವನ್ನು ಕಿತ್ತುಕೊಂಡರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಜನಸ್ಪಂದನ ಸಮಾವೇಶದಲ್ಲಿ ಸಚಿವರು, ಶಾಸಕರು ಡಾನ್ಸ್ ಮಾಡಿದ್ದರಲ್ಲಿ ತಪ್ಪೇನಿಲ್ಲ ಎಂದರು.