ಸವಣೂರ: ಕೋವಿಡ್ ಹಿನ್ನೆಲೆಯಲ್ಲಿ ಒಂದು ವಾರ ಮೊದಲೇ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ರೈತರು ಕರೊನಾ ಜಾಗೃತಿ ಮೂಲಕ ಬಿತ್ತನೆ ಬೀಜ ಖರೀದಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.
ಕೃಷಿ ಇಲಾಖೆ ವತಿಯಿಂದ ತಾಲೂಕಿನ ಕಡಕೋಳ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಂಗಾರು ಹಂಗಾಮಿಗಾಗಿ ಪ್ರಸಕ್ತ ಸಾಲಿನಲ್ಲಿ ಅವಶ್ಯಕತೆಗಿಂತ ಹೆಚ್ಚುವರಿಯಾಗಿ ಶೇ. 38ರಷ್ಟು ಬಿತ್ತನೆ ಬೀಜ ದಾಸ್ತಾನಿಡಲಾಗಿದೆ. ಆದ್ದರಿಂದ, ರೈತರು ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಳೆ ಆಧಾರಿತವಾಗಿ ಬಿತ್ತನೆ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಕಡಕೋಳ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘಕ್ಕೆ ಕೇಂದ್ರ ಸರ್ಕಾರದ ಎಸ್ಎಂಎಎಂ ಯೋಜನೆಯಡಿ 8 ಲಕ್ಷ ರೂಪಾಯಿ ಅನುದಾನದಲ್ಲಿ ಟ್ರ್ಯಾಕ್ಟರ್ ಸೇರಿ ವಿವಿಧ ಕೃಷಿ ಉಪಕರಣಗಳನ್ನು ವಿತರಿಸಿದರು.
ಸವಣೂರ ಕೃಷಿ ಇಲಾಖೆ ಆವರಣದಲ್ಲಿ ಪುರಸಭೆ ಅಧ್ಯಕ್ಷೆ ಶೈಲಾ ಹನುಮಂತಗೌಡ ಮುದಿಗೌಡ್ರ ಬಿತ್ತನೆ ಬೀಜ ಕೇಂದ್ರ ಉದ್ಘಾಟಿಸಿ, ರೈತರಿಗೆ ಬಿತ್ತನೆ ಬೀಜ ವಿತರಿಸಿದರು. ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ಡಿ.ಎಂ., ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ, ಬಿಜೆಪಿ ತಾಲೂಕು ಅಧ್ಯಕ್ಷ ಗಂಗಾಧರ ಬಾಣದ, ಪುರಸಭೆ ಸದಸ್ಯರಾದ ಮಹೇಶ ಮುದಗಲ್, ಸದಾನಂದ ಕೆಮ್ಮಣಕೇರಿ, ತೊಂಡೂರ ಗ್ರಾಪಂ ಅಧ್ಯಕ್ಷ ನಂದೀಶ ಗೊಡ್ಡೆಮ್ಮಿ, ಸಿದ್ದಪ್ಪ ಗುಂಜಳ, ರಾಮಣ್ಣ ಕಳಸದ ಇತರರು ಪಾಲ್ಗೊಂಡಿದ್ದರು.
ವಿವಿಧೆಡೆ ಚಾಲನೆ
ತಾಲೂಕಿನ ಹತ್ತಿಮತ್ತೂರ ಹೋಬಳಿ ವ್ಯಾಪ್ತಿಯ ಯಲವಿಗಿ, ಕಡಕೋಳ, ಹತ್ತಿಮತ್ತೂರ ಹಾಗೂ ಚಿಕ್ಕಮರಳಿಹಳ್ಳಿ ಗ್ರಾಮಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ವಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದರು.