ಜಿಲ್ಲೆ

ಶೇ.30ರಷ್ಟು ಟಿಕೆಟ್ ಯುವಕರಿಗೆ: ನಿಖಿಲ್ ಕುಮಾರಸ್ವಾಮಿ ಅಭಿಮತ

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಶೇ.30ರಷ್ಟು ಟಿಕೆಟ್‌ಅನ್ನು ಯುವಕರಿಗೆ ಕೊಡಬೇಕು ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಟಿಕೆಟ್ ನೀಡುವಾಗ ಯುವಕರಿಗೂ ಅದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದೇನೆ. ಅದೇ ರೀತಿ ಯುವಕರು ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯಕ್ಕೆ ಬರಬೇಕು. ಗೆಲ್ಲುವ ಅರ್ಹತೆ ಇರುವ ಯುವ ನಾಯಕರು ಟಿಕೆಟ್ ಪಡೆದು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.
ಯುವಕರಿಗೆ ಟಿಕೆಟ್ ನೀಡುವ ನಿಟ್ಟಿನಲ್ಲಿ ಸರ್ವೇ ಮಾಡಿಸುತ್ತಿದ್ದೇವೆ. ಗೆಲ್ಲುವ ಸಾಮರ್ಥ್ಯ ಇರುವ ಯುವ ನಾಯಕರಿಗೆ ಟಿಕೆಟ್ ಕೊಡುತ್ತೇವೆ. ಇದರೊಂದಿಗೆ ಮಹಿಳೆಯರು, ಕಾರ್ಯಕರ್ತರನ್ನು ಪರಿಗಣಿಸಲಾಗುವುದು ಎಂದರು.
ಸಂಸದರ ಭೇಟಿಗೆ ಅಸಮಾಧಾನ:
ಮಳವಳ್ಳಿಯ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಕ್ಷೇತ್ರದ ಸಂಸದರು ಘಟನೆ ನಡೆದ ದಿನವೇ ಸಂತ್ರಸ್ಥೆಯ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಬೇಕಿತ್ತು. ಆದರೆ, ನಾಲ್ಕು ದಿನಗಳ ಬಳಿಕ ಬೇರೆ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಭೇಟಿ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಅನ್ನದಾನಿ ಅವರೊಂದಿಗೆ ನಾನು, ಇನ್ನಿತರ ಮುಖಂಡರು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಆತ್ಮಸ್ತೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಬಾಲಕಿಯ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲೂ ಶಾಸಕ ಅನ್ನದಾನಿ ಶ್ರಮಿಸಿದ್ದಾರೆ ಎಂದರು.