ಸಂಡೂರು: ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಪದವಿ ಮಾಡಿದವರಿಗೆ ಜಿಂದಾಲ್ ಸಂಸ್ಥೆಯಲ್ಲಿ ಉದ್ಯೋಗ ಬೇಕೆಂದರೆ ಸಾಧ್ಯವಿಲ್ಲ. ಆ ಕಂಪನಿಗೂ ಒಂದು ಮಿತಿ ಇರುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಪಟ್ಟಣದ ಶ್ರೀಶೈಲೇಶ್ವರ ಶಾಲೆಯಲ್ಲಿ ಸಂತೋಷ್ ಲಾಡ್ ಫೌಂಡೇಷನಿಂದ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಭಾನುವಾರ ಮಾತನಾಡಿದರು. ಉದ್ಯೋಗ ಮೇಳದಲ್ಲಿ ಶೇ.30ಕ್ಕೂ ಹೆಚ್ಚು ಯುವತಿಯರು ಪಾಲ್ಗೊಂಡಿದ್ದರು. 6 ತಿಂಗಳ ನಂತರ ನಮ್ಮ ಫೌಂಡೇಷನ್‌ನಿಂದ ಮತ್ತೆ ಉದ್ಯೋಗ ಮೇಳ ಏರ್ಪಡಿಸುವೆ ಎಂದು ಭರವಸೆ ನೀಡಿದರು.
ರಾಜಕೀಯವನ್ನು ಬಹಳ ಹತ್ತಿರದಿಂದ ಅರಿಯ ಬೇಕು. ಈ ದೇಶ ಯಾರ ಸ್ವತ್ತು ಅಲ್ಲ. ನಮ್ಮದು ಈ ದೇಶ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಪ್ರಚಾರಕ್ಕಿಂತ ಕ್ರಿಯಾಶೀಲತೆಗೆ ಯಾರು ಹೆಚ್ಚು ಒತ್ತು ನೀಡುತ್ತಾರೆ ಎಂಬುದನ್ನು ನೋಡಬೇಕು. ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿ ದೊರೆಯುವಂತೆ ಸಂವಿಧಾನದಿಂದ ಸಾಧ್ಯವಾಗಿದೆ ಎಂದರು.
ಸಂಸದ ಈ.ತುಕಾರಾಮ್ ಮೇಳ ಉದ್ಘಾಟಿಸಿ ಮಾತನಾಡಿ, ಉದ್ಯೋಗ ಅರಸಿ ಮೂರು ಸಾವಿರ ಜನರು ಬಂದಿದ್ದು, ಉದ್ಯೋಗ ನೀಡುವುದಕ್ಕಾಗಿ 50 ಕಂಪನಿಗಳು ಬಂದಿವೆ ಎಂದರು.
ಆನ್‌ಲೈನ್ ಮೂಲಕ 3025 ಜನರು ನೋಂದಣಿ, ನೇರ ಸಂದರ್ಶನದ ಮೂಲಕ 1541 ಜನರು ಹಾಜರಾಗಿದ್ದರು. ಈ ಪೈಕಿ 885 ಜನರು ಅಂತಿಮ ಹಂತ ತಲುಪಿದ್ದು, 642 ಜನರಿಗೆ ಉದ್ಯೋಗದ ಆಫರ್ ಲೆಟರ್ ನೀಡಲಾಗಿದೆ. ಈ ಪೈಕಿ 36 ಜನರು ಅಂಗವಿಕಲರಾಗಿದ್ದಾರೆ.
ಶ್ರೀ ಪ್ರಭುಸ್ವಾಮೀಜಿ, ಶಾಸಕಿ ಅನ್ನಪೂರ್ಣ ತುಕಾರಾಮ್, ಮಾಜಿ ಎಂಎಲ್ಸಿ ಕೆಎಸ್‌ಎಲ್.ಸ್ವಾಮಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ, ವಾಡಾ ಮಾಜಿ ಅಧ್ಯಕ್ಷ ರೋಷನ್ ಜಮೀರ್, ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ.ಲತಾ ಉಜ್ಜಪ್ಪ, ಅನಿತಾ ರೆಡ್ಡಿ, ಶ್ರೀಶೈಲೇಶ್ವರ ಶಾಲೆಯ ಕಾರ್ಯದರ್ಶಿ ಚಿದಂಬರ ಎಸ್.ನಾನಾವಟೆ, ಅಡಳಿತಾಧಿಕಾರಿ ಕುಮಾರ್ ಎಸ್.ನಾನಾವಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಏಕಾಂಬ್ರಪ್ಪ, ಸಿ.ಸತೀಶ್ ಕುಮಾರ್, ಜಿಪಂ ಮಾಜಿ ಸದಸ್ಯ ತುಮಟಿ ಲಕ್ಷ್ಮಣ, ಕೆ.ಸತ್ಯಪ್ಪ, ಜಯರಾಂ ಮುಂತಾದವರಿದ್ದರು.