ಹಾಸನ : ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವರದಿಯಾದ ಜನನ, ನಿರ್ಜೀವ ಜನನ ಮತ್ತು ಮರಣ ಘಟನೆಗಳನ್ನು ಎಚ್ಚರಿಕೆಯಿಂದ ಸಕಾಲದಲ್ಲಿ ನೋಂದಾಯಿಸುವ ಮೂಲಕ ಶೇ.100 ರಷ್ಟು ಗುರಿ ಸಾಧಿಸಲು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಪ್ರಭಾರಿ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಾಗರಿಕ ನೋಂದಣಿ ಪದ್ಧತಿ ಕುರಿತು ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜನನ-ಮರಣವಾಗಿ 21 ದಿನದೊಳಗೆ ನೋಂದಣಿಯಾದರೆ ಉಚಿತವಾಗಿ ಪ್ರಮಾಣ ಪತ್ರದ ಒಂದು ಪ್ರತಿಯನ್ನು ಸಂಬಂಧಪಟ್ಟವರಿಗೆ ತಲುಪಿಸುವುದು ಪ್ರತಿಯೊಬ್ಬ ನೋಂದಣಾಧಿಕಾರಿ ಜವಾಬ್ದಾರಿಯಾಗಿದೆ. ನೋಂದಣಿಯಾದ ಬಳಿಕ ನಿಯಮಾನುಸಾರ ನಿಗದಿತ ಶುಲ್ಕ ಪಡೆದು ನೀಡುವಂತೆ ಸೂಚಿಸಿದರು.
2015ರ ಹಿಂದಿನ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಆಗಿರುವ ಜನನ ಮತ್ತು ಮರಣಗಳ ದಾಖಲೆಗಳನ್ನು ಸ್ಕ್ಯಾನಿಂಗ್ ಮತ್ತು ಡಿಜಿಟಲೈಜೆಷನ್ ಮಾಡಲು ಅಧಿಕಾರಿಗಳು ಕ್ರಮವಹಿಸುವಂತೆ ಪೂರ್ಣಿಮಾ ಅವರು ತಿಳಿಸಿದರು.
ತಾಲ್ಲೂಕು ಮಟ್ಟದ ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಯನ್ನು ಪ್ರತಿ ತಿಂಗಳು ನಡೆಸಿ ಸಭಾ ನಡಾವಳಿ ಕಳುಹಿಸುವಂತೆ ಸೂಚಿಸಿದರು. ಜನನ-ಮರಣ ನೋಂದಣಾಧಿಕಾರಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಂಬಂಧಿಸಿದಂತೆ ವರದಿಗಳನ್ನು ಸಕಾಲದಲ್ಲಿ ಸಲ್ಲಿಸುವಂತೆ ತಿಳಿಸಿದರು.
ಸಾರ್ವಜನಿಕರು ಮನೆಯಲ್ಲಾದ ಜನನ-ಮರಣ ಘಟನೆಗಳನ್ನು ಸೇವಾ ಸಿಂಧು ತಂತ್ರಾಂಶದಲ್ಲಿ ನೋಂದಾಯಿಸುವಂತೆ ಅರಿವು ಮೂಡಿಸಲು ತಿಳಿಸಿದರಲ್ಲದೆ, ಇತ್ತೀಚೆಗೆ ಇ-ತಂತ್ರಾಂಶದಲ್ಲಿ ಕೆಲವು ಮಾರ್ಪಾಡುಗಳಾಗಿರುವುದನ್ನು ಅನುಸರಿಸಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುನೀತ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಲ್.ಬಿ.ರಾಜನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.