ಜಿಲ್ಲೆ

ಶೇ.1 ಪ್ರತ್ಯೇಕ ಮೀಸಲಾತಿಗೆ ಒತ್ತಾಯ

ಚಿತ್ರದುರ್ಗ: ಜಸ್ಟೀಸ್ ನಾಗಮೋಹನ್‌ದಾಸ್ ಆಯೋಗ ವರದಿಯಂತೆ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಶೇ.1ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ರಾಜ್ಯ ಭ್ರಷ್ಟಾಚಾರ ವಿರೋಧಿ ಆಂದೋಲನ ಅಧ್ಯಕ್ಷ ಹನುಮಂತಪ್ಪ ದುರ್ಗ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೇ.1 ಮೀಸಲಾತಿಗಾಗಿ ಹೊಸದಿಲ್ಲಿಯಲ್ಲಿ ಈ ಸಮುದಾಯಗಳು ಹೋರಾಟ ನಡೆಸುತ್ತಿವೆ. ಧ್ವನಿಯಿಲ್ಲದ ಸಮುದಾಯಗಳನ್ನು ಕಡೆಗಣಿಸಬಾರದು. ಶಿಕ್ಷಣ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಈ ಸಮುದಾಯಗಳಿಗೆ ಶೇ.1 ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದರು.

ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿ, ಈ ಸಮುದಾಯಗಳ ಮೀಸಲಾತಿ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ವಕೀಲ ಪ್ರತಾಪ್‌ಜೋಗಿ ಮಾತನಾಡಿ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳು ಕೇಂದ್ರದ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರಿಗೆ 15 ಸಾವಿರ ಪತ್ರ ಬರೆದು ಮೀಸಲಾತಿಗೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಸಿದರು.

ನಾಗರಾಜ್, ಸುಧಾಕರ್, ಮಹೇಶ್ ಇದ್ದರು.