ಜಿಲ್ಲೆ

ಶೆಟ್ಟಿಕೇರಿ ಕೆರೆಯಂಚಲ್ಲಿ ಹಸಿರು ಕ್ರಾಂತಿ

ಲಕ್ಷ್ಮೇಶ್ವರ : ಅನೇಕ ಕಾರಣಗಳಿಂದ ನಾಶವಾಗುತ್ತಿರುವ ಅರಣ್ಯ ಸಂಪತ್ತನ್ನು ಮತ್ತೆ ಬೆಳೆಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ನಿರಂತರ ಕಾರ್ಯ ನಿರ್ವಹಿಸುತ್ತಿದೆ.

ಶಿರಹಟ್ಟಿ/ಲಕ್ಷ್ಮೇಶ್ವರ ತಾಲೂಕಿನ ಕಪ್ಪತಗುಡ್ಡದ ಸೆರಗಿನಲ್ಲಿ 12 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಮತ್ತಷ್ಟು ಸಮೃದ್ಧಗೊಳಿಸುವ ಮತ್ತು ಸಾರ್ವಜನಿಕ ಸ್ಥಳ, ರೈತರ ಜಮೀನುಗಳಲ್ಲಿ ಗಿಡಗಳನ್ನು ಬೆಳೆಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಅದಕ್ಕಾಗಿ ಎರಡೂ ತಾಲೂಕಿನ ಮಧ್ಯದಲ್ಲಿನ 35 ಎಕರೆ ವಿಸ್ತೀರ್ಣದ ಶೆಟ್ಟಿಕೇರಿ ಕೆರೆಯಂಚಿನ ಅರಣ್ಯದಲ್ಲಿ, ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಯ ಎರಡು ಪ್ರತ್ಯೇಕ ಸಸ್ಯಪಾಲನಾ ಕೇಂದ್ರಗಳಿವೆ. ಅರಣ್ಯ ಇಲಾಖೆ ಸಿಬ್ಬಂದಿ, ದಿನಗೂಲಿಗಳು ವಿವಿಧ ಜಾತಿಯ ಸಾವಿರಾರು ಸಸಿಗಳನ್ನು ಬೆಳೆಸುವ ಮೂಲಕ ಹಸಿರೀಕರಣಕ್ಕಾಗಿ ಶ್ರಮಿಸುತ್ತಿದೆ.

ಸಸ್ಯಪಾಲನಾ ಕೇಂದ್ರಗಳಲ್ಲಿ ಹುಣಸೆ, ಬೇವು, ಹೊಂಗೆ, ತೇಗ, ಹೆಬ್ಬೇವು, ಮಾವು, ಅರಳಿ, ರೆನ್ ಟ್ರೀ, ಆಲ, ಬಸರಿ, ತಪಸಿ, ಬಿದಿರು, ಹೊಳೆಮತ್ತಿ, ಕರಿಬೇವು, ಕಾಡು ಬಾದಾಮಿ ಸೇರಿ ವಿವಿಧ ಜಾತಿಯ ಲಕ್ಷಾಂತರ ಸಸಿಗಳನ್ನು ಬೆಳೆಸಲಾಗಿದೆ. ಎಲ್ಲವೂ ಜೂನ್ 5ರ ವಿಶ್ವ ಪರಿಸರ ದಿನದಂದು ನೆಡಲು ಸಿದ್ಧಗೊಂಡಿವೆ.

ಶೆಟ್ಟಿಕೇರಿಯ ಸಸ್ಯಪಾಲನಾ ಕೇಂದ್ರದಲ್ಲಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ 1.14 ಲಕ್ಷ ವಿವಿಧ ಜಾತಿಯ ಸಸಿಗಳು ಸಿದ್ಧಗೊಂಡಿವೆ. ಅದರಲ್ಲಿ 15 ಸಾವಿರ ಸಸಿಗಳನ್ನು ಶಾಲಾ-ಕಾಲೇಜು, ಉದ್ಯಾನ, ಸಾರ್ವಜನಿಕ ಸ್ಥಳದಲ್ಲಿ ನೆಡಲು ಉಚಿತವಾಗಿ ನೀಡಲಾಗುವುದು. ಇನ್ನುಳಿದ ಸಸಿಗಳನ್ನು ತಾಲೂಕಿನ ಮಜ್ಜೂರ, ಬಾಲೆಹೊಸೂರ, ಬನ್ನಿಕೊಪ್ಪ, ಜಲ್ಲಿಗೇರಿ, ಕಡಕೋಳ ಭಾಗದ 200 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ನೆಡುತೋಪಿಗಾಗಿ ಬಳಸಲಾಗುವುದು. | ಸತೀಶ ಪೂಜಾರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ
ರೈತರಿಗಾಗಿ 50 ಸಾವಿರ ಸಸಿಗಳು, ಶಾಲಾ-ಕಾಲೇಜು, ಸರ್ಕಾರಿ ಕಚೇರಿ ಸೇರಿ ಸಾರ್ವಜನಿಕ ವಿತರಣೆಗೆ 30 ಸಾವಿರ ಮತ್ತು ರಸ್ತೆ ಬದಿ ನೆಡಲು 10 ಸಾವಿರ ಸಸಿಗಳಿವೆ. ಈಗಾಗಲೇ ನರೇಗಾ ಯೋಜನೆಯಡಿ ರೈತರ ಜಮೀನುಗಳಲ್ಲಿ ನಿರ್ವಣಗೊಂಡಿರುವ ಬದುವಿನ ಮೇಲೆ ನೆಡುವ ಸಾಂಕೇತಿಕ ಕಾರ್ಯಕ್ರಮದ ಮೂಲಕ ಜೂನ್ 5ರಂದು ಚಾಲನೆ ನೀಡಲಾಗುವುದು.| ಚನ್ನಬಸವರಾಜ ಕಟ್ಟಿಮನಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ

EndFragment