ಹುಬ್ಬಳ್ಳಿ: ಭೀಕರ ಪ್ರವಾಹದಿಂದ ಆಗಿರುವ ಆಸ್ತಿ ಮತ್ತು ಬೆಳೆ ಹಾನಿ, ಹಿಂದಿನ ಸರ್ಕಾರಗಳ ನಿರ್ಲಕ್ಷ್ಯಂದ ಬಾಕಿ ಉಳಿದಿರುವ ಮೂಲ ಸೌಕರ್ಯ ಮತ್ತು ಇತರ ಕಾಮಗಾರಿಗಳು, ರೈತರ ಸಾಲ ಮನ್ನಾ ಬಾಕಿ, ಮಹದಾಯಿ ನದಿ ನೀರಿನ ಹಕ್ಕು ಬಳಸಿಕೊಳ್ಳುವುದು, ಹೊಸ ನೀರಾವರಿ ಮತ್ತು ಇತರ ಅಭಿವೃದ್ಧಿ ಯೋಜನೆಗಳ ಬೇಡಿಕೆ…
ಉತ್ತರ ಕರ್ನಾಟಕದ ಅವಶ್ಯಕತೆಗಳ ಪಟ್ಟಿ ಹೀಗೆ ಬೆಳೆಯುತ್ತಿರುವಾಗಲೇ ರಾಜ್ಯ ಮುಂಗಡಪತ್ರ ಮಂಡನೆ ದಿನ ಸಮೀಪಿಸುತ್ತಿದೆ. ಸರ್ಕಾರಕ್ಕೆ ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ದೊಡ್ಡ ಶಕ್ತಿ ನೀಡಿದೆ. ಹೀಗಾಗಿ, ಈ ಸಲವಾದರೂ ಸಮಾಧಾನಕರ ಅನುದಾನ ಸಿಕ್ಕೀತೆ? ಸರ್ಕಾರದಲ್ಲಿ ಉತ್ತರ ಕರ್ನಾಟಕದ ಪ್ರಮುಖ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ, ಕೈಗಾರಿಕಾ ಖಾತೆ ಮತ್ತು ಧಾರವಾಡ, ಬೆಳಗಾವಿ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿರುವ ಜಗದೀಶ ಶೆಟ್ಟರ್ ಸೇರಿ ಪ್ರಮುಖರ ಪ್ರಭಾವ ಸಾಬೀತಾಗುತ್ತದೆಯೆ ಎಂಬ ಕುತೂಹಲ ಉಂಟಾಗಿದೆ.
ಇಡೀ ರಾಜ್ಯದ ಗಮನ ಸೆಳೆದಿರುವುದು ಮಹದಾಯಿ ಹೋರಾಟ. ರಾಜ್ಯದ ನೀರಿನ ಹಕ್ಕನ್ನು ನಿಗದಿಪಡಿಸಿದ ನ್ಯಾಯಾಧಿಕರಣದ ಐತೀರ್ಪನ್ನು ಮೊನ್ನೆ ಮೊನ್ನೆ ಗೆಜೆಟ್ ಅಧಿಸೂಚನೆಯಾಗಿ ಪ್ರಕಟಿಸುವ ಮೂಲಕ ಹೋರಾಟಗಾರರ ಆಶಯವನ್ನು ರ್ತಾಕ ಅಂತ್ಯಕ್ಕೆ ತಲುಪಿಸಲಾಗಿದೆ. ಮೇಲಾಗಿ, ಹಿಂದೆ ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಆರಂಭಿಸಿದ ಶ್ರೇಯಸ್ಸನ್ನು ತನ್ನ ಮುಡಿಗೆ ತೊಡಿಸಿಕೊಂಡಿರುವ ಬಿಜೆಪಿ, ಈಗ ಹೊಸದಾಗಿ ಡಿಪಿಆರ್ ಸಿದ್ಧಪಡಿಸಿ, ಶೀಘ್ರವಾಗಿ ಟೆಂಡರ್ ಕರೆದು ಗುಣಮಟ್ಟದ ಕೆಲಸ ಮಾಡಿಸಿ ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸಿ ತನ್ನ ಶಕ್ತಿ, ಕಾಳಜಿಯನ್ನು ಶ್ರುತಪಡಿಸಬೇಕಿದೆ. ಅದಕ್ಕೆ ಮೊದಲ ಹೆಜ್ಜೆಯಾಗಿ ಮುಂಗಡಪತ್ರದಲ್ಲಿ 400- 500 ಕೋಟಿ ರೂ. ಖಾತ್ರಿಪಡಿಸುವುದು ಅನಿವಾರ್ಯವಾಗಿದೆ.
ಕಳೆದ ತಿಂಗಳಲ್ಲಷ್ಟೇ ‘ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ’ ಸಮಾವೇಶವನ್ನು ಭರ್ಜರಿಯಾಗಿ ನಡೆಸಿ ಅಂದಾಜು 75 ಸಾವಿರ ಕೋಟಿ ರೂ.ಗಳ ಹೂಡಿಕೆ ಭರವಸೆ ಪಡೆದಿರುವುದರಿಂದ, ಕೈಗಾರಿಕಾ ಮೂಲಸೌಕರ್ಯಕ್ಕೆ ದೊಡ್ಡ ಪ್ರಮಾಣದ ಅನುದಾನ ಬೇಕಿದೆ.
ಧಾರವಾಡ ಸೇರಿ ವಿವಿಧ ಜಿಲ್ಲೆಗಳ ರೈತರ ಸಾಲ ಮನ್ನಾ ಹಣ ಇನ್ನೂ ಬಾಕಿ ಇದೆ. ಅಲ್ಲೊಂದು ಇಲ್ಲೊಂದು ಅನ್ನದಾತರ ಆತ್ಮಹತ್ಯೆ ಘಟನೆಗಳು ಸಂಭವಿಸುತ್ತಲೇ ಇರುವುದು ಅತ್ಯಂತ ಕಳವಳಕಾರಿ. ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಒಂದೇ ಗಂಟಿನಲ್ಲಿ ಎಲ್ಲ ಬಾಕಿ ಮೊತ್ತ ತೀರುವಳಿ ಮಾಡುವುದು ತುರ್ತು ಅಗತ್ಯ. ಜೊತೆಗೆ, ಕೃಷಿ ಹೊಂಡಗಳ ಬಾಕಿ ಸಹಾಯಧನ, ಈಗಾಗಲೇ ಮಂಜೂರಿ ಕೊಟ್ಟಿರುವ ಕಾಮಗಾರಿಗಳ ಬಾಕಿ ಮೊತ್ತ ಪಾವತಿ; ಚೇತರಿಸಿಕೊಳ್ಳಲು ಪರಿತಪಿಸುತ್ತಿರುವ ಧಾರವಾಡ ಜಿಲ್ಲೆಯ ಎನ್ಜಿಇಫ್ಗೆ ಆರ್ಥಿಕ ಬೆಂಬಲ, ಮಠ ಮಾನ್ಯಗಳ ಬೇಡಿಕೆ, ವೈದ್ಯಕೀಯ ಕಾಲೇಜ್ಗಳು, ವಿಶ್ವ ವಿದ್ಯಾಲಯಗಳು ಇತ್ಯಾದಿಗಳ ಬೇಡಿಕೆ… ಹೀಗೆ ಪಟ್ಟಿ ದೊಡ್ಡದೇ ಇದೆ.
ಬಿರುಬೇಸಿಗೆ ಆರಂಭವಾಗಿದ್ದು, ಕುಡಿಯುವ ನೀರು ಪೂರೈಕೆ ಒಂದು ಸವಾಲು. ನಗರ-ಗ್ರಾಮಾಂತರದ ಅನೇಕ ಯೋಜನೆಗಳ ಜಾರಿಗೆ ಮುಂಗಡಪತ್ರದ ಬೆಂಬಲ ಬೇಕಾಗಿದೆ.
ಇವೆಲ್ಲವೂ ಮುಂಗಡಪತ್ರದಲ್ಲೇ ಘೊಷಣೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಚಿವ ಜಗದೀಶ ಶೆಟ್ಟರ್ ಮತ್ತು ಇತರ ಜನಪ್ರತಿನಿಧಿಗಳ ಮೇಲಿದೆ.
200 ಕೋಟಿ ರೂ. ಅಗತ್ಯ: ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಇದಕ್ಕಾಗಿ ಭೂಸ್ವಾಧೀನವನ್ನು ರಾಜ್ಯ ಸರ್ಕಾರ ಮಾಡಿಕೊಡಬೇಕಿದ್ದು, ನೂರಾರು ಕೋಟಿ ರೂ.; ಕೇಂದ್ರ ರಸ್ತೆ ನಿಧಿಯಲ್ಲಿ ಮಂಜೂರಾಗಿರುವ ಹಲವು ರಸ್ತೆ ಅಗಲೀಕರಣಕ್ಕೆ ಭೂಮಿ ವಶಪಡಿಸಿಕೊಳ್ಳಲು ಕನಿಷ್ಠ 200 ಕೋಟಿ ರೂ.ಗಳ ಅಗತ್ಯವಿದೆ.
ಹಳೆ ಬಾಕಿ ಬರಬೇಕಿದೆ: ಹು-ಧಾ ಮಹಾನಗರ ಪಾಲಿಕೆಗೆ ನಿವೃತ್ತರ ಪಿಂಚಣಿ ವಿಭಾಗದ ಹಳೆ ಬಾಕಿ ಮೊತ್ತ 70 ಕೋಟಿ ರೂ.ಗಳಷ್ಟು ಬರಬೇಕಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ವಿವಿಧ ರಿಯಾಯಿತಿ ಪಾಸ್ಗಳ ಹಣ 722 ಕೋಟಿ ರೂ. ಬಾಕಿ ಇದೆ. ಅಲ್ಲಲ್ಲಿ ನಡೆಸಿದ ತುರ್ತು ಕಾಮಗಾರಿಗಳು, ವಿವಿಧ ಮಾಸಾಶನಗಳು ಸೇರಿ ನೂರಾರು ಕೋಟಿ ರೂ.ಗಳನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ. ಈ ಎಲ್ಲವನ್ನೂ ಬಜೆಟ್ನಲ್ಲೇ ಅಡಕಗೊಳಿಸಿದರೆ ಮಾತ್ರ ಜನರಿಗೆ ವಿಶ್ವಾಸ ಬರುತ್ತದೆ.</