ಶೃಂಗೇರಿ: ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾಳಜಿ ತೋರುಬೇಕು. ತಾಲೂಕನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ತಾಲೂಕು ರೈತ ಸಂಘದ ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಕೆ.ಶಿವರಾಮ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಮಾತನಾಡಿ, ಅತಿಯಾದ ಮಳೆಯಿಂದ ತಾಲೂಕಿನಲ್ಲಿ ಅಡಕೆ, ಕಾಳುಮೆಣಸು, ಏಲಕ್ಕಿ, ಕಾಫಿ ನಾಶವಾಗಿ ರೈತರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಬೆಳೆ ಹಾನಿಗೆ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿ ಜಾರಿ ಮಲೆನಾಡಿಗರಿಗೆ ಕಂಟಕವಾಗಿದೆ. ಸರ್ಕಾರ ಕೃಷಿಕರು ಹಾಗೂ ಜನಸಾಮಾನ್ಯರ ಬದುಕಿಗೆ ಮಾರಕವಾಗಿರುವ ಯೋಜನೆಗಳನ್ನು ರದ್ದು ಮಾಡುವತ್ತ ದಿಟ್ಟ ಹೆಜ್ಜೆ ಇಡಬೇಕು. ಅಡಕೆ ಸ್ಪ್ರೇ ಮಾಡುವ ದೋಟಿಗೆ ಸಬ್ಸಿಡಿ ನೀಡಬೇಕು. ತಾಲೂಕಿಗೆ ಗೋಶಾಲೆಯ ಅಗತ್ಯವಿದ್ದು ಶೀಘ್ರ ಆರಂಭಿಸುವಂತೆ ಆಗ್ರಹಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಪೂರ್ಣೆಶ್ ಗೌಡ, ಪದಾಧಿಕಾರಿಗಳಾದ ನಾಗೇಶ್ ಮಾರನಕೂಡಿಗೆ, ಚನ್ನಕೇಶವ, ಚಂದ್ರಪ್ಪ ತೆಕ್ಕೂರು, ಕೀರ್ತಿ ಮಾಗಲು, ಶ್ರೀನಿವಾಸ್ ಹಾಲಂದೂರು, ಯೋಗಪ್ಪ, ಹಿರಿಯಪ್ಪ ಹಂದಿಗುಳಿ ಇತರರಿದ್ದರು.