ಶೃಂಗೇರಿ: ಶೃಂಗೇರಿ ಶಾರದಾಪೀಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬುಧವಾರ ಬೆಳಗ್ಗೆ ಏಳು ಗಂಟೆಗೆ ಶ್ರೀ ಶಂಕರಭಗತ್ಪಾದರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ಮಹಾರುದ್ರ ಪುರಶ್ಚರಣೆ, ಮಧ್ಯಾಹ್ನ 11.30ಕ್ಕೆ ಜಗದ್ಗುರುಗಳಿಂದ ಈಶ್ವರಗಿರಿ ಶ್ರೀ ಭವಾನೀ ಮಲಹಾನಿಕರೇಶ್ವರ ಸ್ವಾಮಿಗೆ ಫಲಪಂಚಾಮೃತ ಅಭಿಷೇಕ, ಶಿವಸಹಸ್ರನಾಮ ಅರ್ಚನೆ, ಧಾರ್ಮಿಕ ಕಾರ್ಯಗಳು ನೆರವೇರಿದವು.
ತಾಲೂಕಿನ ಸದ್ಭಕ್ತರು ಶ್ರೀ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಾಯಂಕಾಲ ಶ್ರೀ ಮಲಹಾನಿಕರೇಶ್ವರಸ್ವಾಮಿ ಸನ್ನಿಧಿಯಲ್ಲಿ ನಾಲ್ಕುಯಾಮ ಪೂಜೆ ನೆರವೇರಿತು.
ಶ್ರೀಮಠದ ನರಸಿಂಹವನದ ಗುರುನಿವಾಸದಲ್ಲಿ ಸಂಜೆ 7.30ರಿಂದ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರಿಂದ ನಾಲ್ಕುಯಾಮದ ವಿಶೇಷ ಪೂಜೆ ನೆರವೇರಿಸಲಾಯಿತು.
ಮಹಾಶಿವರಾತ್ರಿ ಪ್ರಯುಕ್ತ ಮಂಗಳವಾರ ಮಠದ ಶ್ರೀ ನರಸಿಂಹಭಾರತೀ ಯಾಗ ಮಂಟಪದಲ್ಲಿ ಮಹಾರುದ್ರ ಪುರಶ್ಚರಣೆ ಬಳಿಕ ಶ್ರೀ ವಿದ್ಯಾಶಂಕರೇಶ್ವರ ಸ್ವಾಮಿ ಉತ್ಸವದಲ್ಲಿ ಈಶ್ವರಗಿರಿಗೆ ಚಿತ್ತೈಸುವುದು, ಪ್ರದೋಷಪೂಜೆ, ಬೀದಿ ಉತ್ಸವ ಹಾಗೂ ಪ್ರವಚನ ಮಂದಿರದಲ್ಲಿ ಡೋಲೋತ್ಸವ ನೆರವೇರಿಸಲಾಯಿತು.
ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಗಡೂರು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಸರ್ವೇಶ್ವರ ದೇವಾಲಯ, ಕೊಟ್ಟೋಡಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಕಿಗ್ಗಾ ಶ್ರೀ ಋಷ್ಯಶೃಂಗ ದೇವಾಲಯ ಮುಂತಾದ ಕಡೆ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಮನೆಗಳಲ್ಲೂ ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.