ಜಿಲ್ಲೆ

ಶೃಂಗೇರಿ- ಕೊಗ್ರೆ- ಹೊರನಾಡು ಸಂಪರ್ಕ ಕಡಿತ

ಜಯಪುರ: ಗುಡ್ಡೇತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಗ್ರೆ ಸೇತುವೆ ಭಾನುವಾರ ರಾತ್ರಿ ಕುಸಿದಿದ್ದು, ಶೃಂಗೇರಿ- ಕೊಗ್ರೆ- ಹೊರನಾಡು ಬೈಪಾಸ್ ಸೇರಿ ಹೆಗ್ಗಾರುಕುಡಿಗೆ, ಮೇಗೂರು, ಬೈರೆದೇವ್ರು, ಮೇಗುಂದಾ ಬಸದಿ ಸಂಪರ್ಕ ಕಡಿತಗೊಂಡಿದೆ.
ಕೊಗ್ರೆಯ ಹೊಳೆಗೆ ಅಡ್ಡಲಾಗಿ 1956ರಲ್ಲಿ ಸೇತುವೆ ನಿರ್ವಿುಸಲಾಗಿತ್ತು. ಬ್ರಿಡ್ಜ್​ನ ಒಂದು ಭಾಗ ಕಳೆದ ವರ್ಷ ಮಳೆಗಾಲದಲ್ಲಿ ಕುಸಿದಿತ್ತು. ಪಾದಚಾರಿಗಳಿಗೆ ಹಾಗೂ ಸಣ್ಣ ವಾಹನಗಳ ಸಂಚಾರಕ್ಕೆ 15 ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕ ಸೇತುವೆ ನಿರ್ವಿುಸಲಾಗಿತ್ತು. ಆದರೆ ಭಾನುವಾರ ರಾತ್ರಿ ಸೇತುವೆಯ ಉಳಿದ ಭಾಗವೂ ಕುಸಿದಿದೆ.
ಸದ್ಯದ ಪರಿಸ್ಥಿತಿಯಲ್ಲಿ ತಾತ್ಕಾಲಿಕ ಸೇತುವೆ ಮೇಲೆ ವಾಹನ ಸಂಚಾರ ಸಾಧ್ಯವಿಲ್ಲ. ಹೊಳೆಯಾಚೆ ಇರುವ ಕೊಗ್ರೆ ತಲುಪಲು ಇಲ್ಲಿನ ಜನ 20 ಕಿಮೀ ಸುತ್ತಿ ಬರಬೇಕಿದೆ.
3 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ವಣಕ್ಕೆ 2022ರ ಮಾರ್ಚ್​ನಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಗುತ್ತಿಗೆದಾರ ನಿಧಾನವಾಗಿ ಕಾಮಗಾರಿ ಆರಂಭಿಸಿದ್ದರಿಂದ ಹೊಸ ಸೇತುವೆ ಕೆಲಸ ಅರ್ಧಕ್ಕೆ ನಿಂತಿದೆ. ಸೇತುವೆ ಕುಸಿಯುವ ಸ್ಥಿತಿಯಲ್ಲಿದ್ದರೂ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.