ಜಿಲ್ಲೆ

ಶೂನ್ಯದಿಂದ ಶಿಖರ ಏರಲು ಸಾಧ್ಯವಿದೆ, ‘ವಿಜಯಾನಂದ’ ಚಿತ್ರ ವೀಕ್ಷಿಸಿದ ಡಾ. ಮೂಜಗು ಅಭಿಪ್ರಾಯ

ಹುಬ್ಬಳ್ಳಿ: ಇಲ್ಲಿಯ ಪ್ರಸಿದ್ಧ ಶ್ರೀ ಮೂರುಸಾವಿರ ಮಠದ ಜಗದ್ಗುರು ಡಾ. ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಯವರು ನಗರದ ವಿವಿಧ ಗಣ್ಯರೊಂದಿಗೆ ಬುಧವಾರ ‘ವಿಜಯಾನಂದ’ ಚಲನಚಿತ್ರ ವೀಕ್ಷಿಸಿದರು.

ಮೂರುಸಾವಿರ ಮಠದ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರೊಂದಿಗೆ ಪಿವಿಆರ್ ಸಿನಿಮಾ ಮಂದಿರದಲ್ಲಿ ಚಲನಚಿತ್ರ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯಾನಂದ ಚಿತ್ರವನ್ನು ನೋಡಲೇಬೇಕು ಎಂಬ ಅಪೇಕ್ಷೆ ಇತ್ತು. ಡಾ. ವಿಜಯ ಸಂಕೇಶ್ವರ ಅವರ ಜೀವನ ಯಾತ್ರೆಯನ್ನು ಬೇರೆಯವರಿಂದ ಕೇಳಿ ತಿಳಿದುಕೊಂಡಿದ್ದೇವು. ಆದರೆ, ಅವರ ಜೀವನ ಸಾಧನೆಯು ಚಲನಚಿತ್ರವಾಗಿ ಮೂಡಿ ಬರುತ್ತಿದೆ ಎಂದು ಕೇಳಿದಾಗ ಬಹಳ ಸಂತೋಷವಾಯಿತು. ಆ ಚಿತ್ರ ಹೇಗೆ ಬಂದಿದೆ ಎಂಬ ಕುತೂಹಲ ಇತ್ತು. ಚಿತ್ರ ನೋಡಿದಾಗ ಶೂನ್ಯದಿಂದ ಯಶಸ್ಸಿನ ಶಿಖರ ಏರಲು ಸಾಧ್ಯವಿದೆ ಅನಿಸುತ್ತದೆ ಎಂದು ಸ್ವಾಮೀಜಿ ಹೇಳಿದರು.

ಛಲ ಇದ್ದರೆ ಯಾರೇ ಆಗಲಿ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಚಲನಚಿತ್ರ ಸ್ಪೂರ್ತಿ ಮತ್ತು ಮಾರ್ಗದರ್ಶಕವಾಗಿದೆ. ಇದು ಡಾ. ಸಂಕೇಶ್ವರ ಅವರ ನಿಜವಾದ ಬದುಕಿನ ಚಿತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.

ಡಾ. ವಿಜಯ ಸಂಕೇಶ್ವರ ಅವರ ಪುತ್ರ ಡಾ. ಆನಂದ ಸಂಕೇಶ್ವರ ಅವರು ಮೊದಲ ಬಾರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಅವರು ಚಿತ್ರ ನಿಮಾಣ ಕ್ಷೇತ್ರದಲ್ಲೂ ದೊಡ್ಡ ಯಶಸ್ಸು ಸಾಧಿಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಸ್ವಾಮೀಜಿ ಹೇಳಿದರು.

ಶೇ. 100 ತೆರಿಗೆ ವಿನಾಯಿತಿ ನೀಡಬೇಕು

ಮೂರುಸಾವಿರ ಮಠದ ವಿದ್ಯಾವರ್ಧಕ ಸಂಘದ ನಿರ್ದೇಶಕ ಸದಾನಂದ ಡಂಗನವರ ಮಾತನಾಡಿ, ಸ್ವಾಮೀಜಿಯವರು ಹಾಗೂ ವಿದ್ಯಾರ್ಥಿಗಳೊಂದಿಗೆ ‘ವಿಜಯಾನಂದ’ ವೀಕ್ಷಣೆ ಮಾಡಿದ್ದು ನನ್ನ ಸೌಭಾಗ್ಯ. ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಡಾ. ವಿಜಯ ಸಂಕೇಶ್ವರ ಅವರ ಜೀವನವೇ ದಂತಕಥೆ. ರಾಜ್ಯ, ದೇಶದ ಎಲ್ಲ ಯುವಕರಿಗೆ, ನಿರುದ್ಯೋಗಿಗಳಿಗೆ ಪ್ರೇರಣೆ ನೀಡುವಂತಿದೆ. ಸ್ವಂತ ಉದ್ಯೋಗ ಹೇಗೆ ಪ್ರಾರಂಭಿಸಬೇಕು, ಅದರಲ್ಲಿ ಬದ್ಧತೆ ಹೇಗಿರಬೇಕು ಎಂಬುದನ್ನು ಚಿತ್ರ ತಿಳಿಸಿಕೊಟ್ಟಿದೆ ಎಂದರು.

ಡಾ. ವಿಜಯ ಸಂಕೇಶ್ವರ ಅವರ ಕಾಯಕ, ಕರ್ತವ್ಯ ನಿಷ್ಠೆ ಇಲ್ಲಿ ಮೂಡಿ ಬಂದಿದೆ. ಲಾರಿ ಉದ್ಯಮ, ರಾಜಕೀಯ, ಪತ್ರಿಕಾ ರಂಗ ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾಯಕನಿಷ್ಠೆ ಇದ್ದರೆ ಯಾರೂ ಬೇಕಾದರೂ ಸಾಧಿಸಬಹುದು ಎಂಬುದನ್ನು ತಿಳಿಸಿಕೊಡುತ್ತದೆ. ಇದನ್ನು ಎಲ್ಲರೂ ವೀಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ವಿಆರ್​ಎಲ್ ಫಿಲ್ಮ್ ಪ್ರೊಡಕ್ಷನ್​ಗೆ ಬಂದಿರುವುದರಿಂದ ಇನ್ನಷ್ಟು ಉತ್ತಮ ಚಿತ್ರಗಳು ಹಾಗೂ ಸಮಾಜಕ್ಕೆ ದಾರಿದೀಪವಾಗುವ ಸಿನಿಮಾಗಳು ಬರಲಿವೆ ಎಂದು ನಿರೀಕ್ಷೆ ಮಾಡಬಹುದು. ಡಾ. ಆನಂದ ಸಂಕೇಶ್ವರ ಅವರು ಕೂಡ ತಮ್ಮ ತಂದೆಯಂತೆ ಸಾಧನೆಯ ಶಿಖರಕ್ಕೆ ಏರಲಿದ್ದಾರೆ ಎಂದರು.

ಇಂತಹ ಪ್ರೇರಣಾದಾಯಿ ಚಿತ್ರಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಿ ಇನ್ನೂ ಹೆಚ್ಚಿನ ಜನರು, ಯುವಕರು ಚಿತ್ರ ನೋಡಲು ಅನುಕೂಲ ಮಾಡಿಕೊಡಬೇಕು. ಕನ್ನಡದ ಮೊದಲ ಬಯೋಪಿಕ್ ಇದಾಗಿದ್ದು, ಇದಕ್ಕೆ ಶೇ. ನೂರರಷ್ಟು ತೆರಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು. ಮೂರುಸಾವಿರ ಮಠದ ವಿದ್ಯಾವರ್ಧಕ ಸಂಘದ ಚೇರ್ಮನ್ ಅರವಿಂದ ಕುಬಸದ, ಶ್ರೀ ಮಠದ ಪಿಯು ಕಾಲೇಜಿನ ಪ್ರಾಚಾರ್ಯ ಬಸವರಾಜ ಸಾಲಿಮಠ, ರಾಜು ಪವಾರ, ಇತರರು ಇದ್ದರು.