ವಿಕ್ರಮ ನಾಡಿಗೇರ, ಧಾರವಾಡ
ಅಂದಾಜು ಮೂರು ದಶಕಗಳಿಂದ ವಿಪರೀತ ಕಾಡುತ್ತಿದ್ದ ಎಚ್‌ಐವಿ-ಏಡ್ಸ್ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳು ಯಶಸ್ವಿಯಾಗಿದ್ದು, ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಇಳಿಮುಖವಾಗುತ್ತಿದೆ. 2013-14ನೇ ಸಾಲಿನಲ್ಲಿದ್ದ ರೋಗದ ಪ್ರತಿಶತ (ಶೇ. 3) ಪ್ರಸಕ್ತ ವರ್ಷದಿಂದ ಶೂನ್ಯದತ್ತ (ಶೇ. 0.58) ದಾಪುಗಾಲು ಹಾಕಿದೆ.
ಸೋಂಕಿತರ ಪ್ರಮಾಣ ಇಳಿಕೆ ಆಗುತ್ತಿರುವುದು ಸಮಾಧಾನದ ಸಂಗತಿ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಕಾರ್ಯಕ್ರಮಗಳ ಫಲ ಇದಾಗಿದೆ. ಸಾಮಾನ್ಯ ಜನರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ರೋಗ ಕ್ರಮೇಣ ಗರ್ಭಿಣಿಯರು, ಅವರಿಂದ ಮಕ್ಕಳಿಗೂ ಆವರಿಸಿತ್ತು. ಹೀಗಾಗಿ ಸಾಮಾನ್ಯರ ಜತೆಗೆ ಗರ್ಭಿಣಿಯರ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆಯಿಂದ ಮಕ್ಕಳಿಗೆ ಹರಡದಂತೆ ಎಚ್ಚರ ವಹಿಸಿದ್ದರಿಂದ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದೆ. 2030ರ ಹೊತ್ತಿಗೆ ಏಡ್ಸ್ ರೋಗ ಮುಕ್ತ ಜಿಲ್ಲೆಯ ಗುರಿ ಹೊಂದಲಾಗಿದೆ.
2013ರಲ್ಲಿ 36580 ಗರ್ಭಿಣಿಯರಿಗೆ ಪರೀಕ್ಷೆ ನಡೆಸಿದ್ದು, ಈ ಪೈಕಿ 39 ಜನರಲ್ಲಿ (ಶೇ.0.10) ಕಂಡಿತ್ತು. ನಂತರದ ವರ್ಷ (2014)ದಲ್ಲಿ ಈ ಪ್ರಮಾಣ ಶೇ. 0.13ಕ್ಕೆ ಏರಿತ್ತು. ಎಚ್ಚೆತ್ತು ಸೂಕ್ತ ಕ್ರಮ ಕೈಗೊಂಡಿದ್ದರಿಂದ 8 ವರ್ಷಗಳ ಬಳಿಕ (2022ರ ನವೆಂಬರ್ ಅಂತ್ಯಕ್ಕೆ) 29499 ಗರ್ಭಿಣಿಯರ ಪೈಕಿ 9 (ಶೇ. 0.03) ಜನರಲ್ಲಿ ರೋಗ ಕಾಣಿಸಿಕೊಂಡಿದೆ.
ರೋಗದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ರೋಗಕ್ಕೆ ತುತ್ತಾಗುತ್ತಿದ್ದರು. ನಂತರದಲ್ಲಿ ಜಾಗೃತಿ ಮೂಡಿಸಿ ರೋಗ ನಿಯಂತ್ರಣಕ್ಕೆ ತರಲಾಗಿದೆ. ಜನಪದ ಕಲಾ ತಂಡಗಳ ಮೂಲಕ ಜಾಗೃತಿ, ಏಡ್ಸ್ ದಿನಾಚರಣೆಯಂದು ಜಾಥಾ, ತಿಳಿವಳಿಕೆ ಕರಪತ್ರ, ಬ್ಯಾನರ್, ಬಿತ್ತಿ ಪತ್ರದ ಮೂಲಕ ಅರಿವು ಮೂಡಿಸುವ ಕೆಲಸವಾಗಿದೆ. ಆರಂಭದಲ್ಲಿ ರೋಗಿಗಳನ್ನು ಸಮಾಜ ನೋಡುತ್ತಿದ್ದ ದೃಷ್ಟಿ ಸಹ ಬದಲಾಗಿದೆ. ರೋಗಿಗಳಿಗೆ ಪ್ರತ್ಯೇಕ ಕೇಂದ್ರಗಳನ್ನು ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ ಜಿಲ್ಲಾಸ್ಪತ್ರೆ, ಹುಬ್ಬಳ್ಳಿ ಕಿಮ್ಸ್ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಉಚಿತ ಔಷಧೋಪಚಾರ ನೀಡುತ್ತಿದ್ದು, ಗುಣಮುಖ ಪ್ರಮಾಣವೂ ಹೆಚ್ಚಿದೆ.
-----ಕೋಟ್-----
ಜಿಲ್ಲೆಯಲ್ಲಿ ಎಚ್‌ಐವಿ ಮತ್ತು ಏಡ್ಸ್ ನಿಯಂತ್ರಣಕ್ಕೆ ನಿರಂತ ಜಾಗೃತಿ ಕಾರ್ಯಕ್ರಮ ಕಾರಣ. ನಿರಂತರವಾಗಿ ತಪಾಣೆ, ಸೂಕ್ತ ಚಿಕಿತ್ಸೆ ನೀಡುವ ಪ್ರಕ್ರಿಯೆ ನಡೆದಿದೆ. 2030 ವರ್ಷದ ಹೊತ್ತಿಗೆ ಎಚ್‌ಐವಿ ಮುಕ್ತ ಜಿಲ್ಲೆ ಮಾಡುವ ಗುರಿ ಇದೆ.
*ಶಶಿ ಪಾಟೀಲ , ಜಿಲ್ಲಾ ಆರೋಗ್ಯಾಧಿಕಾರಿ
----ಬಾಕ್ಸ್----
ಜಿಲ್ಲೆಯ ಅಂಕಿ-ಸಂಖ್ಯೆ
2013ರಲ್ಲಿ 40476 ಜನರನ್ನು ಪರೀಕ್ಷೆ ನಡೆಸಿದ್ದು 1217 (ಶೇ.3) ಜನರಿಗೆ ಎಚ್‌ಐವಿ ಪತ್ತೆಯಾಗಿತ್ತು. ನಂತರ 2014ರಲ್ಲಿ 54584 ಜನರ ಪೈಕಿ 1020, 2015ರಲ್ಲಿ 56331 ಜನರ ಪೈಕಿ 837, 2016ರಲ್ಲಿ 58866 ಜನರ ಪೈಕಿ 722, 2017ರಲ್ಲಿ 59219 ಜನರ ಪೈಕಿ 664, 2018ರಲ್ಲಿ 65903 ಪೈಕಿ 666, 2019ರಲ್ಲಿ 76474 ಪೈಕಿ 580, 2020ರಲ್ಲಿ 15203 ಪೈಕಿ 335, 2021ರಲ್ಲಿ 59757 ಪೈಕಿ 405 ಹಾಗೂ 2022ರ ಈವರೆಗೆ 45337 ಜನರ ಪೈಕಿ 267 ಜನರಿಗೆ (ಶೇ. 0.58) ರೋಗ ಪತ್ತೆಯಾಗಿದೆ.